ಉಗ್ರರ ಗುಂಡಿಗೆ ಬಲಿಯಾದ ಸೈಯದ್‌ ಆದಿಲ್‌ ಹುಸೇನ್‌ ಶಾನ ತಂದೆ ಹೇಳಿದ್ದೇನು?

ಅನಂತನಾಗ್: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇದುವರೆಗೆ 26 ಮಂದಿ ಅಸುನೀಗಿದ್ದು, ಸುಮಾರು ಹತ್ತು ಮಂದಿಯ ಸ್ಥಿತಿ ಗಂಭೀರವಾಗಿದೆ. ದೇಶದ ವಿವಿಧ ರಾಜ್ಯಗಳ ಪ್ರವಾಸಿಗರು ದಾಳಿಯಲ್ಲಿ ಮೃತಪಟ್ಟಿದ್ದು, ಈ ಪೈಕಿ ಸ್ಥಳೀಯ ನಿವಾಸಿ ಸೈಯದ್ ಆದಿಲ್ ಹುಸೇನ್ ಶಾ ಎಂಬವರೂ ಸೇರಿದ್ದಾರೆ. ಪ್ರವಾಸಿಗರನ್ನು ಕುದುರೆಯ ಮೂಲಕ ಸಾಗಿಸಿ ಆದಾಯ ಗಳಿಸುತ್ತಿದ್ದ ಸೈಯದ್ ಆದಿಲ್ ಹುಸೇನ್ ಶಾ, ಕುಟುಂಬದ ಏಕೈಕ ಆಧಾರ ಸ್ತಂಭವಾಗಿದ್ದು, ಇದೀಗ ಮಗನನ್ನು ಕಳೆದುಕೊಂಡ ಕುಟುಂಬ ಬೀದಿಗೆ ಬಿದ್ದಿದೆ. ಈ ಕುರಿತಂತೆ ಮಾಧ್ಯಮದ ಜೊತೆ ಮಾತಾಡಿದ ಸೈಯದ್‌ ಅದಿಲ್‌ ಹುಸೇನ್‌ ಶಾನ ತಂದೆ, ಸೈಯದ್‌ ಹೈದರ್‌ ಶಾ, ಈ ದಾಳಿ ನಮ್ಮ ಕಾಶ್ಮೀರಿಯತ್‌ಗೆ ಕಳಂಕವಾಗಿದೆ. ಸರ್ಕಾರ ಈ ದಾಳಿಯ ತನಿಖೆ ನಡೆಸಿ, ಇಂತಹಾ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ ಎಂದು ಒತ್ತಾಯಿಸಿದ್ದಾರೆ.


ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ಸುಂದರ ಪ್ರದೇಶವಾಗಿದ್ದು, ಇಲ್ಲಿ ಪ್ರಶಾಂತತೆ ನೆಲೆಸಿತ್ತು. ನನ್ನ ಮಗ ಸೈಯದ್ ಆದಿಲ್ ಹುಸೇನ್ ಶಾ ನಮ್ಮ ಕುಟುಂಬದಲ್ಲಿ ಸಂಪಾದಿಸುತ್ತಿದ್ದ ಏಕೈಕ ವ್ಯಕ್ತಿ. ಅವನು ನಿನ್ನೆ ಪಹಲ್ಗಾಮ್‌ಗೆ ಕೆಲಸಕ್ಕೆ ಹೋಗಿದ್ದ. ನಮಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ದಾಳಿಯ ವಿಚಾರ ತಿಳಿಯಿತು. ನಾವು ಅವನಿಗೆ ಕರೆ ಮಾಡಿದೆವು, ಆದರೆ ಅವನ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ನಂತರ, ಸಂಜೆ 4:30 ಕ್ಕೆ, ಅವನ ಫೋನ್ ಆನ್ ಆಯಿತು, ಆದರೆ ಯಾರೂ ಉತ್ತರಿಸಲಿಲ್ಲ. ನಾವು ಪೊಲೀಸ್ ಠಾಣೆಗೆ ಧಾವಿಸಿದೆವು, ಮತ್ತು ಆಗ ಅವನು ದಾಳಿಯಲ್ಲಿ ಗಾಯಗೊಂಡಿದ್ದಾನೆ ಎಂದು ನಮಗೆ ತಿಳಿಯಿತು.ಆದರೆ ಕೆಲವೇ ಕ್ಷಣಗಳಲ್ಲಿ ನನ್ನ ಮಗ ಹುತಾತ್ಮನಾದ ವಿಷಯ ತಿಳಿಯಿತು. ನಮ್ಮ ಕುಟುಂಬದಲ್ಲಿ ಅವನೊಬ್ಬನೇ ದುಡಿದು ನಮ್ಮನ್ನು ಸಾಕುತ್ತಿದ್ದನು. ಅವನ ಸಾವಿಗೆ ನಮಗೆ ನ್ಯಾಯ ಬೇಕು. ಅವನು ಒಬ್ಬ ಅಮಾಯಕ ವ್ಯಕ್ತಿ. ಅವನನ್ನು ಏಕೆ ಕೊಲ್ಲಲಾಯಿತು? ಎಂದು ಗೊತ್ತಿಲ್ಲ. ದಾಳಿಯ ಹೊಣೆಗಾರರನ್ನು ಗಂಭೀರ ಪರಿಣಾಮಗಳನ್ನು ಎದುರಿಸಬೇಕಿದೆ ಎಂದು ಹೇಳಿದರು.

ಶಾ ಅವರ ತಾಯಿ ಕಣ್ಣೀರಿನಲ್ಲಿ ಕೈತೊಳೆದುಕೊಳ್ಳುತ್ತಿದ್ದು, ತಮ್ಮ ಮಗನ ಸಾವಿನಿಂದ ನೊಂದು ಗದ್ಗದಿತರಾದರು. “ಅವನು ನಮಗೆ ಇದ್ದ ಏಕೈಕ ಆಸರೆಯಾಗಿದ್ದನು. ಅವನು ಕುದುರೆ ಸವಾರಿ ಮಾಡಿ ಹಣವನ್ನು ಸಂಪಾದಿಸುತ್ತಿದ್ದನು. ಈಗ ನಮಗೆ ಸಹಾಯ ಮಾಡಲು ಬೇರೆ ಯಾರೂ ಇಲ್ಲ. ಅವನಿಲ್ಲದೆ ನಾವು ಏನು ಮಾಡಬೇಕೆಂದೇ ನಮಗೆ ತಿಳಿದಿಲ್ಲ ಎಂದು ಹೇಳಿದರು.
ಶಾ ಅವರ ಸಂಬಂಧಿ ಮೊಹಿದ್ದೀನ್ ಶಾ ಮಾತನಾಡಿ, “ಆದಿಲ್ ಕುಟುಂಬದಲ್ಲಿ ಹಿರಿಯ ಮಗ. ಅವನಿಗೆ ಮಕ್ಕಳು, ಹೆಂಡತಿ ಇದ್ದು, ಈ ಕುಟುಂಬದ ಬೆನ್ನೆಲುಬಾಗಿದ್ದ. ಈಗ ಅವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಅವರು ಬಡವರು. ಅವರ ಸಹಾಯಕ್ಕಾಗಿ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ. ಆದಿಲ್ ಅವರ ಕುಟುಂಬಕ್ಕೆ ಈಗ ಎಂದಿಗಿಂತಲೂ ಹೆಚ್ಚು ರಕ್ಷಣೆ ಮತ್ತು ಬೆಂಬಲದ ಅಗತ್ಯವಿದೆ” ಎಂದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಹಾಯಕ್ಕಾಗಿ ಸಹಾಯವಾಣಿಗಳು:
ತುರ್ತು ನಿಯಂತ್ರಣ ಕೊಠಡಿ – ಶ್ರೀನಗರ:
0194-2457543, 0194-2483651
ಆದಿಲ್ ಫರೀದ್, ಎಡಿಸಿ ಶ್ರೀನಗರ – 7006058623
24/7 ಪ್ರವಾಸಿ ಸಹಾಯ ಕೇಂದ್ರ – ಪೊಲೀಸ್ ನಿಯಂತ್ರಣ ಕೊಠಡಿ, ಅನಂತನಾಗ್
9596777669 | 01932-225870
ವಾಟ್ಸಾಪ್: 9419051940
ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯ ಸಹಾಯವಾಣಿಗಳು:
ಯಾವುದೇ ಸಹಾಯ ಮತ್ತು ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಿ:
8899931010
8899941010
99066 63868 (ನಿಸ್ಸಾರ್ ಪ್ರವಾಸೋದ್ಯಮ ಸಹಾಯಕ ನಿರ್ದೇಶಕರು)
99069 06115 (ಮುದಸ್ಸಿರ್ ಪ್ರವಾಸಿ ಅಧಿಕಾರಿ)

error: Content is protected !!