ಮದುವೆ ಮನೆಯಲ್ಲಿ ಸೂತಕ: ಸಮುದ್ರದಲೆಗೆ ಸಿಲುಕಿದ್ದ ಮತ್ತೊಬ್ಬನ ಮೃತದೇಹವೂ ಪತ್ತೆ

ಸುರತ್ಕಲ್: ಸುರತ್ಕಲ್‌ ಸಮೀಪದ ಸೂರಿಂಜೆಗೆ ಮದುವೆ ಸಮಾರಂಭಕ್ಕೆಂದು ಬಂದು ಎನ್‌ಐಟಿಕೆ ಬೀಚ್‌ನಲ್ಲಿ ಸಮುದ್ರ ಪಾಲಾಗಿದ್ದ ಇಬ್ಬರ ಹುಡುಗರ ಪೈಕಿ ಒಬ್ಬನ ಮೃತದೇಹ ನಿನ್ನೆಯೇ ಸಿಕ್ಕಿದ್ದು, ಮತೊಬ್ಬ ಹುಡುಗನ ಮೃತದೇಹ ಇಂದು ಸಿಕ್ಕಿದೆ.

ಮುಂಬೈನಲ್ಲಿ ನೆಲೆಸಿರುವ ಬೈಂದೂರು ಮೂಲದ ವಿವೇಕಾನಂದ ಬಂಜನ್ ಅವರ ಪುತ್ರ, ಮುಂಬೈನಲ್ಲಿ ದ್ವಿತೀಯ ಪಿಯುಸಿ ಮುಗಿಸಿರುವ ಧ್ಯಾನ್ ಬಂಜನ್ (18) ಹಾಗೂ ಮುಂಬೈನಲ್ಲಿ ನೆಲೆಸಿರುವ ಮಂಗಳೂರು ಮೂಲದ ಉಮೇಶ್ ಕುಲಾಲ್ ಅವರ ಪುತ್ರ, ಎಸ್ಎಸ್ಎಲ್‌ಸಿ ವಿದ್ಯಾರ್ಥಿ ಅನೀಶ್ ಕುಲಾಲ್ (15) ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.

ಧ್ಯಾನ್‌ ನಿನ್ನೆ ಆಸ್ಪತ್ರೆಗೆ ಸಾಗಿಸುವ ಮುನ್ನ ಮೃತಪಟ್ಟಿದ್ದರೆ, ಅನೀಶ್‌ ಸಮುದ್ರದಲೆಗೆ ಸಿಲುಕಿ ನಾಪತ್ತೆಯಾಗಿದ್ದನು. ಆತನ ಮೃತದೇಹ ಮುಳುಗಿದ ಸ್ಥಳದಲ್ಲೇ ಶೋಧಿಸಿದಾಗ ಪತ್ತೆ ಯಾಗಿದೆ. ಪೊಲೀಸರ ಸಮ್ಮುಖದಲ್ಲಿ ಅನೀಶ್‌ ಮೃತದೇಹದ ಮಹಜರು ನಡೆಸಿ ಆಸ್ಪತ್ರೆಗೆ ಸಾಗಿಸಲಾಯಿತು.

ಸುರತ್ಕಲ್‌ನಲ್ಲಿ ನಡೆದಿದ್ದ ಮದುವೆಗೆಂದು ಮುಂಬೈನಿಂದ ಹತ್ತು ಮಂದಿಯಿದ್ದ ಕುಟುಂಬ ಸೂರಿಂಜೆಯ ಪ್ರಖ್ಯಾತ್ ಎಂಬವರ ಮನೆಗೆ ಮದುವೆ ಬಂದಿತ್ತು. ಮದುವೆ ಮುಗಿಸಿ ಮಂಗಳವಾರ ಸಂಜೆ 5.30ರ ವೇಳೆಗೆ ಎನ್ಐಟಿಕೆ ಬೀಚ್ ಬಳಿ ಈಜಾಡುತ್ತಿದ್ದರು. ನೀರಿನಲ್ಲಿ ಆಡುತ್ತಿದ್ದಾಗಲೇ ಧ್ಯಾನ್ ಮತ್ತು ಹನೀಶ್ ಕುಲಾಲ್ ನೀರಿನ ಅಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಈ ವೇಳೆ ಲೈಫ್ ಗಾರ್ಡ್ ಪ್ರದೀಪ್ ಆಚಾರ್ಯ ಎಂಬವರು, ಅಲೆಗಳ ಎಡೆಯಿಂದ ಧ್ಯಾನ್ ನನ್ನು ಎಳೆದು ಮೇಲಕ್ಕೆ ತಂದಿದ್ದರು. ಆದರೆ ಅನೀಶ್ ಕುಲಾಲ್ ಜೀವರಕ್ಷಕ ಸಿಬ್ಬಂದಿ ಕೈಗೆ ಸಿಗದೆ ನಾಪತ್ತೆಯಾಗಿದ್ದ. ಧ್ಯಾನ್‌ನನ್ನು ಕೂಡಲೇ ಸುರತ್ಕಲ್ ಪದ್ಮಾವತಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಅಷ್ಟರಲ್ಲಿ ಸಾವನ್ನಪ್ಪಿದ್ದನು.

ಸುರತ್ಕಲ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮದುವೆಯ ಸಂಭ್ರಮದಲ್ಲಿದ್ದ ಮನೆಮಂದಿ ಇದೀಗ ಶೋಕಸಾಗರದಲ್ಲಿ ಮುಳುಗಿದ್ದಾರೆ.

error: Content is protected !!