ಬೆಂಗಳೂರು: ನಗರದ ಎಸ್‌ಜಿ ಪಾಳ್ಯದಲ್ಲಿ ಯುವತಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಬೆಂಗಳೂರು ಪೊಲೀಸರು ಕೇರಳದ ಹಳ್ಳಿಯೊಂದರಲ್ಲಿ ಬಂಧಿಸಿದ್ದಾರೆ.
ಕಳೆದ ಎಪ್ರಿಲ್ 3ರಂದು ಘಟನೆ ನಡೆದಿತ್ತು. ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಯು ಕೃತ್ಯ ಎಸಗಿ ಪರಾರಿಯಾಗಿದ್ದು ವಿಡಿಯೋದಲ್ಲಿ ರೆಕಾರ್ಡ್ ಆಗಿತ್ತು. ಮಧ್ಯರಾತ್ರಿ 1:55ರ ಸುಮಾರಿಗೆ ಯುವತಿಯರಿಬ್ಬರು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಯವತಿಯೊಬ್ಬರ ಮೇಲೆ ಯುವಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಸಂದರ್ಭದಲ್ಲಿ ಇಬ್ಬರು ಕಿರುಚಾಡಿದ್ದ ದೃಶ್ಯಗಳು ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಸ್ಥಳೀಯ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಹಿಡಿದುಕೊಂಡು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ತಿಲಕ್ ನಗರದ ಗುಲ್ಬರ್ಗ ಕಾಲೋನಿ ನಿವಾಸಿ ಸಂತೋಷ್ ಡೇನಿಯಲ್ (29) ಎಂದು ಗುರುತಿಸಲಾಗಿದೆ.
ಈತ ಬೆಂಗಳೂರಿನ ಶೋರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ತೀವ್ರ ಕಾರ್ಯಾಚರಣೆಯ ನಂತರ ಆರೋಪಿ ಸೆರೆಸಿಕ್ಕಿದ್ದಾನೆ. ಆರೋಪಿಯ ಬಂಧನಕ್ಕೆ ವಿಶೇಷ ಕಾರ್ಯಾಚರಣೆಯನ್ನು ಕರ್ನಾಟಕದ ಪೊಲೀಸರು ನಡೆಸಿದ್ದರು. ಘಟನೆ ನಡೆದ ಬೆನ್ನಲ್ಲೇ ಬೆಂಗಳೂರಿನ ಎಸ್.ಜಿ. ಪಾಳ್ಯ, ಮಡಿವಾಳ, ತಿಲಕ್‌ನಗರ, ಬೊಮ್ಮನಹಳ್ಳಿ ಮತ್ತು ಆಡುಗೋಡಿ ಸೇರಿದಂತೆ ವಿವಿಧ ಭಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 700ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು.