ಕಾಸರಗೋಡು: ದಿನಸಿ ಅಂಗಡಿ ನಡೆಸುತ್ತಿದ್ದ ಮಹಿಳೆಯೊಬ್ಬರಿಗೆ ಪಕ್ಕದ ಪೀಠೋಪಕರಣ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಬೆಂಕಿ ಹಚ್ಚಿದ ಘಟನೆ ನಿನ್ನೆ ಬೇಡಡ್ಕ ಗ್ರಾಮ ಪಂಚಾಯತ್‌ನ ಮುನ್ನಾದ್ ಬಳಿಯ ಮನ್ನಡುಕ್ಕಂ ಎಂಬಲ್ಲಿ ನಡೆದಿದ್ದು, ಮಹಿಳೆಯನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮಹಿಳೆ ಎರಡು ವಾರಗಳ ಹಿಂದೆ ಬೆಂಕಿ ಹಚ್ಚಿದವನ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದ ಬಗ್ಗೆ ದೂರು ನೀಡಿದ್ದರು. ಇದರ ಹಗೆಯಿಂದ ನಿನ್ನೆ ಕುಡಿದು ಚಿತ್ತಾಗಿ ಬಂದಿದ್ದ ಆರೋಪಿ ಪೈಂಟ್, ಮರದ ಕೆಲಸಗಳಲ್ಲಿ ಬಳಸುವ ಥಿನ್ನರ್ ಎರಚಿ ಬೆಂಕಿ ಹಚ್ಚಿದ್ದಾನೆ ಎಂದು ಮಾಹಿತಿ ಲಭಿಸಿದೆ. ಮಹಿಳೆಯ ಹತ್ತು ವರ್ಷದ ಮಗನ ಮುಂದೆಯೇ ಆರೋಪಿ ಈ ಕೃತ್ಯ ಎಸಗಿದ್ದು, ಈ ಸಂದರ್ಭದಲ್ಲಿ ಇಬ್ಬರು ಗ್ರಾಹಕರು ಕೂಡಾ ಇದ್ದರು ಎಂದು ತಿಳಿದುಬಂದಿದೆ.
ತಮಿಳುನಾಡು ಮೂಲದ ರಾಮಾಮೃತಂ ಕೃತ್ಯ ಎಸಗಿದ ಆರೋಪಿ. ಮನ್ನಡುಕ್ಕಂ ರಮಿತಾ ಈತನಿಂದ ದೌರ್ಜನ್ಯಕ್ಕೀಡಾದ ಸಂತ್ರಸ್ಥೆಯಾಗಿದ್ದಾರೆ.
ಆರೋಪ ರಾಮಾಮೃತಮ್‌ನನ್ನು ಪೊಲೀಸರು ಬಂಧಿಸಲು ಹೋದಾಗ ಆತ ಮದ್ಯದ ಅಮಲಿನಲ್ಲಿದ್ದನು. ಆತನ ಅಮಲು ಇಳಿಯುತ್ತಿದ್ದಂತೆ ಬೇಡಕಂ ಪೊಲೀಸರು ಆತನನ್ನು ಬಂಧಿಸಿದರು.
ಘಟನೆಯ ವಿವರ: ಮಧ್ಯಾಹ್ನ 3.30 ರ ಸುಮಾರಿಗೆ, ಆರೋಪಿ ರಾಮಾಮೃತಮ್ ರಮಿತಾ ಅವರ ಅಂಗಡಿಗೆ ಬಂದು, ಅವರ ಮೇಲೆ ಥಿನ್ನರ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ವೇಳೆ ಇಬ್ಬರು ಗ್ರಾಹಕರು ಸಹ ಇದ್ದರು. ಕೃತ್ಯ ಕಂಡು ಹುಡುಗ ಆಘಾತಕ್ಕೊಳಗಾಗಿದ್ದಾನೆ, ಆದರೆ ಅವನು ಮತ್ತು ಇಬ್ಬರು ಗ್ರಾಹಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಆಕೆಯ ಪತಿ ನಂದಕುಮಾರ್ ಮನ್ನಡುಕಮ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇವರಿಗೂ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ರಾಮಾಮೃತಮ್ ಕಳೆದ 25 ವರ್ಷಗಳಿಂದ ಬೇಡಡ್ಕ ಮತ್ತು ನೆರೆಯ ಕುಟ್ಟಿಕೋಲ್ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದನು. ಆರು ತಿಂಗಳ ಹಿಂದೆ, ರಮಿತಾ ಅವರ ದಿನಸಿ ಅಂಗಡಿಯ ಪಕ್ಕದಲ್ಲಿ ಪೀಠೋಪಕರಣ ವ್ಯವಹಾರ ನಡೆಸಲು ಅಂಗಡಿಯೊಂದನ್ನು ಬಾಡಿಗೆಗೆ ಪಡೆದಿದ್ದನು.
ಈತ ದಿನಲೂ ಕುಡಿದು ಬಂದು ರಮಿತಾ ಜೊತೆ ವಾಗ್ವಾದ ನಡೆಸಿ ನಿಂದಿಸುತ್ತಿದ್ದನು. ಇದರಿಂದ ಕಿರಿಕಿರಿ ಅನುಭವಿಸುತ್ತಿದ್ದ ರಮಿತಾ ಎರಡು ವಾರಗಳ ಹಿಂದೆ, ಅವರು ಬೇಡಡ್ಕ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಇನ್‌ಸ್ಪೆಕ್ಟರ್ ವಲಿಯವಲಪ್ಪಿಲ್ ಪ್ರಕಾರ ಸಣ್ಣ ದೂರು ಆಗಿದ್ದು, ಆದ್ದರಿಂದ ಯಾವುದೇ ಎಫ್‌ಐಆರ್ ದಾಖಲಾಗಿರಲಿಲ್ಲ, ಆದರೆ ನಾವು ಅವರನ್ನು ಸ್ಥಳದಿಂದ ಹೊರಹೋಗುವಂತೆ ಎಚ್ಚರಿಸಿದ್ದೆವು. ನಾವು ಕಟ್ಟಡದ ಮಾಲೀಕರಿಗೆ (ಕರುಣಾಕರನ್) ಕರೆ ಮಾಡಿ ಅಂಗಡಿಯಿಂದ ಹೊರಹಾಕುವಂತೆ ಕೇಳಿಕೊಂಡಿದ್ದೆವು ಎಂದು ಹೇಳಿಕೆ ನೀಡಿದ್ದಾರೆ ʻಆನ್‌ಮನೋರಮಾʼ ವರದಿ ಮಾಡಿದೆ.
ಇನ್ಸ್‌ಪೆಕ್ಟರ್ ಹೇಳಿಕೆ ಪ್ರಕಾರ, ಆರೋಪಿ ರಾಮಾಮೃತಂ ಎರಡು ವಾರಗಳ ಹಿಂದೆಯೇ ಎಲ್ಲಾ ಪೀಠೋಪಕರಣಗಳ ತುಣುಕುಗಳನ್ನು ವರಾಂಡಾಗೆ ಎಸೆದು ಅಂಗಡಿಯನ್ನು ಮುಚ್ಚಿದ್ದನು. ಎಲ್ಲೆಂದರಲ್ಲಿ ಬಿದ್ದಿದ್ದ ತನ್ನ ವಸ್ತುಗಳನ್ನು ಎಂದಿಗೂ ಸಂಗ್ರಹಿಸಲಿಲ್ಲ. ಅವುಗಳ ಪೈಕಿ ಒಂದು ಥಿನ್ನರ್ ಬಾಟಲಿಯನ್ನು ಕಾರಿಡಾರ್‌ನಲ್ಲಿ ಉಳಿದಿತ್ತು. ಇದನ್ನೇ ರಮಿತಾಗೆ ಸುರಿದು ಬೆಂಕಿ ಹಚ್ಚಿ ತನ್ನ ಸೇಡು ತೀರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.