16 ಸಿಸಿ ಕೆಮರಾ, 8 ನಾಯಿಗಳಿದ್ದೂ ಮನೆಯಲ್ಲಿದ್ದ 1 ಕೆಜಿ ಚಿನ್ನ ದೋಚಿದ ಕಳ್ಳರು!

ಮಂಗಳೂರು: ಮನೆಯ ಲಾಕರ್‌ನಲ್ಲಿಟ್ಟ ಸುಮಾರು 1 ಕೆಜಿ ಚಿನ್ನವನ್ನು ಕಳ್ಳರು ಕದ್ದೊಯ್ದ ಘಟನೆ ಮಂಗಳೂರು ಬಜಪೆ ಸಮೀಪದ ಪೆರ್ಮುದೆಯಲ್ಲಿ ಸಂಭವಿಸಿದೆ. ಪೆರ್ಮುದೆಯ ಜಾನ್ವಿನ್‌ ಪಿಂಟೊ ಎಂಬವರ ಮನೆಯಲ್ಲಿ ಕಳ್ಳತನವಾಗಿರುವ ವಿಚಾರ ಬೆಳಕಿಗೆ ಬಂದಿದೆ.

ಜಾನ್ವಿನ್‌ ಪಿಂಟೊ ಮತ್ತು ಅವರ ಪುತ್ರ ಪ್ರವೀಣ್‌ ಪಿಂಟೊ ಕುವೈಟ್‌ನಲ್ಲಿದ್ದಾರೆ. ಮನೆಗೆ ಬೀಗ ಹಾಕಿದ್ದು, ಮನೆಯ ಸುತ್ತ 16 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ ಕಳ್ಳರು ಸಿಸಿ ಕ್ಯಾಮರಾ ಇಲ್ಲದ ಕಡೆಯಿಂದ ಮನೆಗೆ ನುಗ್ಗಿ ಲಾಕರ್‌ನಲ್ಲಿದ್ದ ಅಪಾರ ಚಿನ್ನ ಕಳ್ಳತನ ಮಾಡಿದ್ದಾರೆ.ಕಿಟಿಕಿಯ ಕಬ್ಬಿಣದ ಗ್ರಿಲ್ಸ್‌ ಮುರಿದು ಕಳ್ಳರು ಒಳನುಗ್ಗಿದ್ದಾರೆ. ಮನೆಯಲ್ಲಿ ಮುಧೋಳ, ಜರ್ಮನ್‌ ಶೆಫರ್ಡ್‌ ಸೇರಿ 8 ನಾಯಿಗಳಿವೆ. ಚಾಣಾಕ್ಷ ಕಳ್ಳರು ಇವುಗಳ ಕಣ್ಣುತಪ್ಪಿಸಿ ಕಳ್ಳತನ ಮಾಡಿರುವುದು ಆಶ್ಚರ್ಯ ಉಂಟುಮಾಡಿದೆ. ಈ ನಾಯಿಗಳಿಗೆ ಆಹಾರ ಹಾಕಲು ಇಬ್ಬರು ಕೆಲದಾಳುಗಳು ಬರುತ್ತಿದ್ದು, ಮಂಗಳವಾರ ಬೆಳಗ್ಗೆ ಅವರು ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ.
ಲಾಕರನ್ನು ಕೀ ಬಳಸಿ ತೆರೆದು ಅದರೊಳಗಿದ್ದ 1 ಕೆಜಿಯಷ್ಟು ಚಿನ್ನಾಭರಣಗಳು ಮತ್ತು ದುಬಾರಿ ಬೆಲೆಯ ಹಲವು ಕೈಗಡಿಯಾರಗಳನ್ನು ಕಳ್ಳತನ ಮಾಡಲಾಗಿದೆ. ಕೆಲಸದಾಳುಗಳು ಕೂಡಲೇ ಕುವೈಟ್‌ನಲ್ಲಿರುವ ಜಾನ್ವಿನ್‌ ಪಿಂಟೊ ಅವರಿಗೆ ಸುದ್ದಿ ತಿಳಿಸಿದ್ದಾರೆ. ಸ್ಥಳಕ್ಕೆ ಉನ್ನತ ಪೊಲೀಸ್‌ ಅಧಿಕಾರಿಗಳು ಬಂದು ತನಿಖೆ ನಡೆಸಿದ್ದಾರೆ.

error: Content is protected !!