ತಡಂಬೈಲ್ ವೀರಕೇಸರಿ ಸಂಸ್ಥೆಯ ವಾರ್ಷಿಕೋತ್ಸವಸುರತ್ಕಲ್: ಸಂಘ ಸಂಸ್ಥೆಗಳು ಇದ್ದರೆ ಸಾಲದು, ಸಕ್ರೀಯವಾಗಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತಾಗ ಬೇಕು. ಆ ನಿಟ್ಟಿನಲ್ಲಿ ಸುರತ್ಕಲ್ ತಡಂಬೈಲ್ ನಲ್ಲಿರುವ ವೀರ ಕೇಸರಿ ಸಂಸ್ಥೆ ನಿರಂತರ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ ಎಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ನುಡಿದರು.
ತಡಂಬೈಲ್ ವೀರಕೇಸರಿ ಸಂಸ್ಥೆ ಮಾರಿಗುಡಿ ಬಳಿ ಮಾರಿಪೂಜಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೀರ ಕೇಸರಿ ಸಂಸ್ಥೆ ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಮುಖ್ಯವಾಗಿ ಕಳೆದ 46 ವರ್ಷಗಳಿಂದ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಸಾಂಸ್ಕೃತಿಕ ಮತ್ತು ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಿರುವ ವೀರ ಕೇಸರಿ ಸಂಸ್ಥೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಸನ್ಮಾನಿಸುವುದು ಮುಂತಾದ ಕಾರ್ಯಕ್ರಮಗಳನ್ನು ಸಂಘಟನೆ ನಿರಂತರವಾಗಿ ಮಾಡುತ್ತಿದೆ. ವೀರಕೇಸರಿ ಸಂಸ್ಥೆಯ ಸಮಾಜಮುಖಿ ಚಟುವಟಿಕೆಗಳನ್ನು ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸ ಬೇಕೆಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎನ್ ಐಟಿಕೆ ಸ್ಟೂಡೆಂಟ್ ವೆಲ್ ಫೇರ್ ನ ಡೀನ್ ಪ್ರೊ ಅಂಪಾರು ಚಿತ್ತರಂಜನ್ ಹೆಗ್ಡೆ ಅವರು ಮಾತನಾಡಿ 46 ವರ್ಷಗಳ ವೀರಕೇಸರಿಯ ಕಾರ್ಯ ಚಟುವಟಿಕೆ ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ದೀಪ ಟ್ರೇಡರ್ಸ್ ನ ಮಾಲಕ ರಮೇಶ್ ರಾವ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಡಂಬೈಲ್, ಮನಪಾ ಸದಸ್ಯೆಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ಶಾಂತಾ ಎಸ್ ರಾವ್, ವೀರ ಕೇಸರಿ ಸಂಸ್ಥೆಯ ಸಂಚಾಲಕ ಮಹಾಬಲ ಪೂಜಾರಿ ಕಡಂಬೋಡಿ, ನೂತನ ಅಧ್ಯಕ್ಷ ಪದ್ಮನಾಭ ಕರ್ಕೇರ, ಸುಧಾಕರ ತಡಂಬೈಲ್, ಕೈಲಾಸ್ ತಡಂಬೈಲ್, ಸುಕುಮಾರ್ ತಡಂಬೈಲ್, ರಾಘವೇಂದ್ರ ಶೆಟ್ಟಿ ತಡಂಬೈಲ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಶೋಕ್ ಶೆಟ್ಟಿ, ಪ್ರೇಮಾನಂದ, ರೂಪೇಶ್ ರೈ ಅವರನ್ನು ಸನ್ಮಾನಿಸಲಾಯಿತು. ಪದ್ಮನಾಭ ಕರ್ಕೇರ ಸ್ವಾಗತಿಸಿದರು. ರಾಮಚಂದ್ರ ಶೆಟ್ಟಿ ವಂದಿಸಿದರು. ಮನೋಜ್ ಶೆಟ್ಟಿ ಚೇಳಾರ್ ಕಾರ್ಯಕ್ರಮ ನಿರೂಪಿಸಿದರು.