“ಎ.12ಕ್ಕೆ ಎರಡನೇ ವರ್ಷದ ಗುರುಪುರ ಕಂಬಳ“ -ಇನಾಯತ್ ಅಲಿ


ಮಂಗಳೂರು:
ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ದ್ವಿತೀಯ ವರ್ಷದ ಹೊನಲು ಬೆಳಕಿನ ಗುರುಪುರ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು.
ಬಳಿಕ ಮಾತಾಡಿದ ಕಂಬಳ ಸಮಿತಿಯ ಅಧ್ಯಕ್ಷ ಇನಾಯತ್ ಅಲಿ ಅವರು, “ಎರಡನೇ ವರ್ಷದ ಕಂಬಳವನ್ನು ಕಳೆದ ಬಾರಿಗಿಂತ ಹೆಚ್ಚು ಸಂಭ್ರಮ ಸಡಗರದಿಂದ ನಡೆಸಲು ಸಮಿತಿ ತೀರ್ಮಾನ ಕೈಗೊಂಡಿದೆ. ಏಪ್ರಿಲ್ 12ರಂದು ಶನಿವಾರ ನಡೆಯಲಿರುವ ಕಂಬಳಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಕೊನೆಯ ಕಂಬಳವಾದ್ದರಿಂದ ಜನರಿಗೆ ನೆನಪಲ್ಲಿ ಉಳಿಯುವಂತೆ ಆಯೋಜನೆ ಮಾಡಲಾಗುತ್ತದೆ. ಎಲ್ಲ ಕಂಬಳ ಪ್ರೇಮಿಗಳು ಬಂದು ಕಂಬಳೋತ್ಸವದಲ್ಲಿ ಪಾಲ್ಗೊಳ್ಳಿ” ಎಂದರು.
ಗುಣಪಾಲ ಕಡಂಬ ಮಾತಾಡಿ, “ಹಿಂದೆ ಮೂಲ್ಕಿ ಪೈಯೊಟ್ಟು ನಾಗರಾಜ ಅನ್ನುವ ಕೋಣದ ಹೆಸರಲ್ಲಿ ಕಂಬಳದ ಅಂಚೆ ಚೀಟಿಯನ್ನು ಹಿಂದೆ ಬಿಡುಗಡೆ ಮಾಡಲಾಗಿತ್ತು. ಈ ಸಾರಿ ಕಂಬಳದ ಕೋಣ ಪದವು ಕಾನಡ್ಕ ದೂಜನ ನೆನಪಿನಲ್ಲಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು. ಕಂಬಳದಲ್ಲಿ ಚಾಂಪಿಯನ್ ಆಗಿದ್ದ ದೂಜನ ಹಟ್ಟಿಗೆ ವಿರೋಧಿಗಳು ವಾಮಾಚಾರ ಮಾಡಿದ್ದರು. ಆದರಿಂದ ದೂಜನಿಗೆ ಅನಾರೋಗ್ಯ ಉಂಟಾಯಿತು. ಕಂಬಳ ಕ್ಷೇತ್ರದಿಂದ ಹಿಂದೆ ಉಳಿದು ಓಡಲಾರದ ಸ್ಥಿತಿಯಲ್ಲಿ ದೂಜ ಕಣ್ಣೀರು ಹಾಕುವಂತಾಯಿತು. ಪದವು ಕಾನಡ್ಕ ಊರಿಗೆ ಹೆಸರು ಬಂದಿದ್ದು ದೂಜ ಅನ್ನುವ ಕೋಣದಿಂದ“ ಎಂದರು.

ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್ ಮಾತಾಡಿ, ”ಗುರುಪುರ ಕಂಬಳ ಸರ್ವಧರ್ಮ ಜಾತಿ ಪಕ್ಷ ಬೇಧವಿಲ್ಲದೆ ಎಲ್ಲರೂ ಸೇರಿ ಆಚರಿಸುವ ಹಬ್ಬ. ಈ ಬಾರಿ ಹಿಂದಿನ ಬಾರಿಗಿಂತ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದಕ್ಕಾಗಿ ಎಲ್ಲ ರೀತಿಯ ಪೂರ್ವಸಿದ್ಧತೆಯನ್ನು ಕೈಗೊಳ್ಳಲಾಗಿದೆ“ ಎಂದರು.
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮಾತಾಡಿ, ”ಇನಾಯತ್ ಅಲಿ ಅವರಂತಹ ಸಮಾಜಪರ ಕಾಳಜಿಯುಳ್ಳ ಯುವಕರು ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ನಮ್ಮ ಸಂಸ್ಕೃತಿ ಉಳಿಯುತ್ತದೆ. ಕಂಬಳದ ಬಗ್ಗೆ ಅಪಾರ ಪ್ರೀತಿ ಕಾಳಜಿಯುಳ್ಳ ಡಿ.ಕೆ.ಶಿವಕುಮಾರ್ ಅವರು ಇದರಲ್ಲಿ ಭಾಗವಹಿಸುತ್ತಿರುವುದು ಸಂತಸದ ವಿಚಾರ“ ಎಂದರು.

ಜಿಲ್ಲಾ ಕಂಬಳ ಸಮಿತಿಯ ಲೋಕೇಶ್ ಶೆಟ್ಟಿ ಮುಚ್ಚೂರು ಉಪಸ್ಥಿತರಿದ್ದರು.
ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!