ಚೆನ್ನೈ: ಜಯಲಲಿತಾಗಾಗಿ ಶಿಲುಬೇರಿದ್ದ ತಮಿಳು ಖ್ಯಾತ ನಟ, ಕರಾಟೆ ಲೆಜೆಂಟ್ ಎಂದೇ ಹೆಸರುವಾಸಿಯಾಗಿದ್ದ ಶಿಹಾನ್ ಹುಸೈನಿ ಇಂದು (ಮಾ.25) ಬೆಳಗ್ಗೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರ ನಿಧನದ ವಿಚಾರವನ್ನು ಅಧಿಕೃತವಾಗಿ ನಟನ ಕುಟುಂಬಸ್ಥರು ತಿಳಿಸಿದ್ದಾರೆ. ಶಿಹಾನ್ ನಿಧನದ ಸುದ್ದಿ ತಿಳಿದು ನಮಗೆ ದುಃಖವಾಗಿದೆ. ಅಂತಿಮ ದರ್ಶನಕ್ಕಾಗಿ ನಟನ ಪಾರ್ಥಿವ ಶರೀರ ಸಂಜೆಯವರೆಗೆ ಬೆಸೆಂಟ್ ನಗರದಲ್ಲಿರುವ ನಿವಾಸದಲ್ಲಿರುತ್ತದೆ. ಬಳಿಕ ಶಿಹಾನ್ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗುತ್ತದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕರಾಟೆ ತರಬೇತುದಾರರಾಗಿ ಖ್ಯಾತಿಯಾಗಿದ್ದ ಅವರು, 1986ರ ಕೆ. ಬಾಲಚಂದರ್ ಅವರ ʼಪುಂಗನಿ ಮನ್ನನ್ʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆ ಬಳಿಕ ರಜನಿಕಾಂತ್ ಅವರ ʼವೆಲೈಕಾರನ್ʼ (1987), ʼಉನ್ನೈ ಸೊಲ್ಲಿ ಕುಟ್ರಮಿಲ್ಲೈʼ (1990), ʼವೇದನ್ (1993), ವಿಜಯ್ ಅವರ ʼಬದ್ರಿʼ (2001) ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ 2022ರಲ್ಲಿ ಬಂದಿದ್ದ ವಿಜಯ್ ಸೇತುಪತಿ ಅವರ ʼಕಾತುವಾಕುಲ ರೆಂಡು ಕಾದಲ್ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಶಿಲುಬೆಗೇರಿದ್ದ ಶಿಹಾನ್ʻ
ಶಿಹಾನ್ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜೆ ಜಯಲಲಿತಾ ಅವರ ಕಟ್ಟಾ ಅಭಿಮಾನಿಯಾಗಿದ್ದರು. ಜಯಲಲಿತಾ ಅವರನ್ನು ದೇವತೆಯಂತೆ ಅವರು ಪೂಜಿಸಿದ್ದರು. 2015ರಲ್ಲಿ ಜಯಲಲಿತಾ ಅಧಿಕಾರಕ್ಕೆ ಬರಬೇಕೆನ್ನುವ ನಿಟ್ಟಿನಲ್ಲಿ ಸ್ವಯಂ ಶಿಲುಬೆಗೇರಿಸಲ್ಪಟ್ಟಿದ್ದರು. ಜಯಲಲಿತಾ ಮತ್ತೆ ಅಧಿಕಾರಕ್ಕೆ ಬರಬೇಕೆನ್ನುವ ಸಲುವಾಗಿ ಅವರ ಕೈ ಮತ್ತು ಕಾಲುಗಳನ್ನು 300 ಕೆಜಿ ತೂಕದ ಮರದ ಶಿಲುಬೆಗೆ ಹೊಡೆಯಲಾಗಿತ್ತು.
2005 ರಲ್ಲಿ ಜಯಲಲಿತಾ ಅವರ 56 ನೇ ಹುಟ್ಟುಹಬ್ಬದಂದು ತಮ್ಮ ರಕ್ತವನ್ನು ಬಳಸಿ ಅವರ 56 ಭಾವಚಿತ್ರಗಳನ್ನು ರಚಿಸಿದ್ದರು. 2013 ರಲ್ಲಿ ತಮ್ಮ ರಕ್ತವೂ ಸೇರಿದಂತೆ 11 ಲೀಟರ್ ರಕ್ತವನ್ನು ಬಳಸಿ ನಾಯಕಿಯ ಹೆಪ್ಪುಗಟ್ಟಿದ ರಕ್ತದ ಪ್ರತಿಮೆಯನ್ನು ರಚಿಸಿದ್ದರು. ಪೋಪ್ ಜಾನ್ ಪಾಲ್ IIರ 22 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಕಲ್ಪನಾ ಚಾವ್ಲಾ ಮತ್ತು ವೀರಪ್ಪನ್ ಅವರ ಪ್ರತಿಮೆಗಳನ್ನು ಕೆತ್ತಿದ್ದು, ಅಂದಿನ ಶ್ರೀಲಂಕಾದ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಭಾವಚಿತ್ರವನ್ನು ಹಂದಿಯ ರಕ್ತದಿಂದ ಚಿತ್ರಿಸಿದ್ದು ಸೇರಿದಂತೆ ಹಲವು ವಿವಾದಗಳಿಂದಲೂ ಅವರು ಸುದ್ದಿಯಾಗಿದ್ದರು.
1980ರ ದಶಕದಲ್ಲಿ ಅವರನ್ನು ಶ್ರೀಲಂಕಾದ ಉಗ್ರಗಾಮಿ ಎಂದು ಸುಳ್ಳು ಆರೋಪ ಹೊರಿಸಿ 10 ದಿನಗಳ ಕಾಲ ತಿಹಾರ್ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು. ಕರಾಟೆ ಮಾಸ್ಟರ್ ಆಗಿ ಅವರು ಹಲವು ಖ್ಯಾತ ಕಲಾವಿದರಿಗೆ ಕರಾಟೆ ತರಬೇತಿಯನ್ನು ಕೊಟ್ಟಿದ್ದರು. ತನ್ನ ಕೊನೆಯ ದಿನಗಳಲ್ಲಿ ತನ್ನ ಕರಾಟೆ ವಿದ್ಯಾರ್ಥಿಗಳಾಗಿದ್ದ ಪವನ್ ಕಲ್ಯಾಣ್, ವಿಜಯ್ ಅವರು ತನಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು.