ಮಂಗಳೂರು: ಉಡುಪಿಯ ಮಲ್ಪೆಯಲ್ಲಿ ಇತ್ತೀಚೆಗೆ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಹಲ್ಲೆಗೈದ ಘಟನೆಯನ್ನು ವಿಧಾನ ಪರಿಷತ್ ಶಾಸಕರು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿರುವ ಮಂಜುನಾಥ ಭಂಡಾರಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ʻಉಡುಪಿಯಲ್ಲಿ ಮೀನು ಕದ್ದ ಕಾರಣ ಕೊಟ್ಟು ಕಾರ್ಮಿಕ ಮಹಿಳೆಯನ್ನು ಕಂಬಕ್ಕೆ ಕಟ್ಟಿಹಾಕಿ ಥಳಿಸಿರುವ ಘಟನೆ ನಿಜಕ್ಕೂ ಖೇದಕರ. ಸಂಸ್ಕೃತಿಯ ನಾಡು ದೇಗುಲಗಳ ಬೀಡು ಎಂದೇ ಕರೆಯಲ್ಪಡುವ ಉಡುಪಿ ಜಿಲ್ಲೆಗೆ ಇಂತಹ ಘಟನೆಗಳು ಶೋಭೆ ತರುವಂತದ್ದಲ್ಲ. ಘಟನೆ ಕುರಿತು ಸೂಕ್ತ ಕ್ರಮಕ್ಕೆ ನಾಗರಿಕರು ಒತ್ತಾಯಿಸಿರುವ ಹಿನ್ನೆಲೆಯಲ್ಲಿ ಗೃಹ ಸಚಿವರಲ್ಲಿ ಘಟನೆಯನ್ನು ವಿವರಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ. ಮುಂದೆ ಇಂತಹ ಕೃತ್ಯ ನಾಗರಿಕ ಸಮಾಜದಲ್ಲಿ ಜರುಗದಂತೆ ಎಚ್ಚರಿಕೆ ವಹಿಸುವಂತೆ ಸಭ್ಯ ನಾಗರಿಕರು ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕಿದೆʼ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.