ಮಂಗಳೂರು: ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ ಎಂದು ಹಿಂದೂ ಯುವಕರಿಗೆ ಸಲಹೆ ನೀಡಿದ್ದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಕ್ರವರ್ತಿ ಸೂಲಿಬೆಲೆ ಇತ್ತೀಚೆಗೆ ಕುತ್ತಾರಿನಲ್ಲಿ ನಡೆದ ‘ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ’ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಕೋಮು ದ್ವೇಷ ಭಾಷಣ ಮಾಡಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಉಳ್ಳಾಲ ಠಾಣೆಗೆ ಭಾನುವಾರ ದೂರು ನೀಡಿದ್ದರು. ಈ ದೂರು ಆಧರಿಸಿ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೂಲಿಬೆಲೆ ಹೇಳಿದ್ದಿಷ್ಟು:
“ಮತಾಂತರ ಎಂದು ಬಡಿದಾಡಿದ್ದು ಸಾಕು. ಈಗ ಹಿಂದೂ ಧರ್ಮಕ್ಕೆ ಘರ್ ವಾಪ್ಸಿ ಮಾಡೋ ಬಗ್ಗೆ ಮಾತಾಡಿ. ಎಲ್ಲಿವರೆಗೆ ಲವ್ ಜಿಹಾದ್, ಮತಾಂತರ ಬಗ್ಗೆ ಮಾತನಾಡೋದು? ಎಷ್ಟು ದಿನ ನಮ್ಮ ಹುಡುಗಿಯರನ್ನೇ ನೋಡ್ತಿಯಪ್ಪ ಅಂತ ನಮ್ಮ ಗಂಡು ಮಕ್ಕಳಿಗೆ ಕೇಳೋಣ. ಬೇರೆ ಧರ್ಮದ ಹುಡುಗಿಯರನ್ನೂ ನೋಡು ಅಂತ ಹೇಳಬೇಕು. ಅನ್ಯಧರ್ಮದ ಯುವತಿಯರನ್ನು ಪ್ರೀತಿಸಿ ಮದುವೆಯಾಗಿ” ಎಂದು ಹಿಂದೂ ಯುವಕರಿಗೆ ಕರೆ ನೀಡಿದ್ದರು. “ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಲ್ಲ ಅನ್ನೋವಾಗ ಪಕ್ಕದ ಸಮಾಜದಲ್ಲೂ ಸಮಸ್ಯೆಯಿದೆ ಎಂದು ಧೈರ್ಯ ತುಂಬಿ. ನಾವು ಆಕ್ರಮಣಕಾರಿಯಾಗಿ ಆಡಬೇಕು, ರಕ್ಷಣಾತ್ಮಕವಾಗಿ ಆಡಿದ್ದು ಸಾಕು. ಟೆಸ್ಟ್ ಮ್ಯಾಚ್‌ಗಳು ನಿಂತು ಹೋಯ್ತು. ಈಗ ಟ್ವೆಂಟಿ ಟ್ವೆಂಟಿ ಮ್ಯಾಚ್ ಆಡೋ ಸಮಯ ಬಂದಾಗಿದೆ. ಇರುವ ಇಪ್ಪತ್ತು ಓವರ್‌ನಲ್ಲಿ ಬಡಿಬೇಕು ಅಷ್ಟೇ. ಘರ್ ವಾಪ್ಸಿ ಹೇಗೆ ಮಾಡೋದು ಅನ್ನೋದರ ಬಗ್ಗೆ ರೀಲ್ಸ್ ಮಾಡಿ. ಹಿಂದೂ ಧರ್ಮದಿಂದ ಹೋಗಿರುವವರನ್ನು ಮೊದಲು ವಾಪಸ್ ತರೋಣ” ಎಂದು ಭಾಷಣ ಮಾಡಿದ್ದರು.
ಇದು ಕೋಮು ದ್ವೇಷದ ಭಾಷಣವಾಗಿದ್ದು, ಚಕ್ರವರ್ತಿ ಸೂಲಿಬೆಲೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಉಳ್ಳಾಲ ಠಾಣೆಗೆ ರವಿವಾರ ದೂರು ನೀಡಿದ್ದರು.