ಮಂಗಳೂರು: “ಮೊನ್ನೆ ಆದಿತ್ಯವಾರ ಸ್ಕೂಟರ್ ನಲ್ಲಿ ಬಂದಿದ್ದ ಇಬ್ಬರು ಯುವಕರು ಜೈಲಿಗೆ ಪೊಟ್ಟಣ ಎಸೆದಿದ್ದಾರೆ. ಜೈಲರ್ ಅದರಲ್ಲಿ ಚಾಪುಡಿ ಇತ್ತು ಎನ್ನುತ್ತಾರೆ. ಹಾಗಾದ್ರೆ ಸರಕಾರಕ್ಕೆ ಖೈದಿಗಳಿಗೆ ಒಂದು ಚಹಾ ಕೊಡುವ ಯೋಗ್ಯತೆ ಇಲ್ಲವೇ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಖೈದಿಗಳ ಮನಸ್ಸು ಪರಿವರ್ತನೆಯಾಗಬೇಕು ಎಂದು ಜೈಲಿಗೆ ಕಳುಹಿಸಿದರೆ ಅಲ್ಲಿ ಈ ರೀತಿ ಡ್ರಗ್ಸ್ ಪೂರೈಕೆಯಾದರೆ ಹೇಗೆ? ಸರಕಾರ ಪೊಲೀಸ್ ಇಲಾಖೆಗೆ ಸ್ವಾತಂತ್ರ್ಯ ಕೊಡುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಪಡೆಯಲು ಹೊರರಾಷ್ಟ್ರ, ರಾಜ್ಯ, ಜಿಲ್ಲೆಗಳಿಂದ ಮಕ್ಕಳು ಬರುತ್ತಿದ್ದಾರೆ. ಜಿಲ್ಲೆಯಲ್ಲಿ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಸರಕಾರಕ್ಕೆ ಮನಸ್ಸಿಲ್ಲ. ಕೇಳಿದ್ರೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಎನ್ನುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಮತ್ತೊಂದು ಪಂಜಾಬ್ ಮಾಡಲು ಸರಕಾರ ಮುಂದಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕು“ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಾಜಿ ಮೇಯರ್ ಕವಿತಾ ಸನಿಲ್ ಮಾತಾಡಿ, ”ನಾನು ಆ ರಸ್ತೆಯಲ್ಲಿ ಹೋಗುತ್ತಿದ್ದಾಗ ಇಬ್ಬರು ಯುವಕರು ಪೊಟ್ಟಣವನ್ನು ಜೈಲಿನೊಳಕ್ಕೆ ಎಸೆದಿದ್ದಾರೆ. ಈ ಹಿಂದೆ ನಾನು ಮೇಯರ್ ಆಗಿದ್ದಾಗ ಇಂತದ್ದೇ ಘಟನೆ ನಡೆದಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ವಿಶ್ವಾಸವಿಟ್ಟು ತಮ್ಮ ಮಕ್ಕಳನ್ನು ಹೆತ್ತವರು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಆದರೆ ಹಾಡಹಗಲೇ ಇಂತಹ ಘಟನೆ ನಡೆದರೆ ಇದಕ್ಕೆ ಹೊಣೆ ಯಾರು? ನಂಬರ್ ಪ್ಲೇಟ್ ಇಲ್ಲದ ಸ್ಕೂಟರ್ ನಲ್ಲಿ ಹೆಲ್ಮೆಟ್ ಕೂಡ ಧರಿಸದೆ ಓಡಾಡಿದರೂ ಪೊಲೀಸರ ಗಮನಕ್ಕೆ ಬರುವುದಿಲ್ಲ. ಸಾಮಾನ್ಯ ಜನರನ್ನು ಮಾತ್ರ ಹಿಡಿಯುತ್ತಾರೆ. ಇದನ್ನು ಪ್ರಶ್ನಿಸಿದರೆ ಚಹಾ ಪುಡಿ ಎಂದು ಕಿಡಿಗೇಡಿಗಳ ಬೆಂಬಲಕ್ಕೆ ನಿಲ್ಲುತ್ತಾರೆ. ನಮ್ಮ ಒತ್ತಾಯ ಇಷ್ಟೇ, ಅದನ್ನು ಎಸೆದವರು ಯಾರು? ಆತನಿಗೆ ಎಲ್ಲಿಂದ ಪೂರೈಕೆಯಾಯಿತು ಎಂಬುದರ ಕುರಿತು ತನಿಖೆ ಮಾಡಿ“ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷ್ಣಾಪುರ, ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಗರೋಡಿ, ಅಶ್ವಿತ್ ಕೊಟ್ಟಾರಿ, ರಕ್ಷಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.