ಮಂಗಳೂರು: ಮಹಾಶಿವರಾತ್ರಿ ಪ್ರಯುಕ್ತ ಗುರುನಗರ ಓಂ ಶ್ರೀ ಮಠದಲ್ಲಿ ಪಂಚಾಕ್ಷರಿ ಲಕ್ಷಾರ್ಚನೆ ಯಜ್ಞ ಪೂರ್ಣಾಹುತಿ ಸೋಮವಾರ ಸಂಜೆ ನಡೆಯಿತು.
ಬಳಿಕ ಮಾತಾಡಿದ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರು, “ಲೋಕ ಕಲ್ಯಾಣಾರ್ಥವಾಗಿ ಪಂಚಾಕ್ಷರಿ ಲಕ್ಷಾರ್ಚನೆ ಯಜ್ಞ ನಡೆದಿದೆ. ಇದರ ಫಲ ಸನಾತನ ಧರ್ಮ ಮತ್ತು ಅದರ ರಕ್ಷಣೆಗೆ ಕಟಿಬದ್ಧವಾಗಿರುವ ಸರ್ವ ಸನಾತನಿಗಳಿಗೂ ಸಿಗುವಂತಾಗಲಿ” ಎಂದರು.
ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಅವರು ಮಾತಾಡಿ, “ಮಹಾವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಮಠದಲ್ಲಿ ಯಜ್ಞ ನಡೆದು ಇಂದು ಪೂರ್ಣಾಹುತಿ ನಡೆದಿದೆ. ಇದರಿಂದ ಲೋಕಕ್ಕೆ ಒಳಿತಾಗಲಿ. ಭಕ್ತರ ಇಷ್ಟಾರ್ಥ ಸಿದ್ಧಿಸಲಿ” ಎಂದರು.
ಈ ವೇಳೆ 9 ದಿನಗಳ ಕಾಲ ಯಜ್ಞ ನಡೆಸಿದ ಮಾತಾಶ್ರೀ ಓಂ ಶ್ರೀ ಶಿವಜ್ಞಾನಮಯಿ ಸರಸ್ವತಿ ಹಾಗೂ ಮಹಾಮಂಡಲೇಶ್ವರ ಸ್ವಾಮಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಅವರನ್ನು ಪುಷ್ಪವೃಷ್ಟಿಗೈದು ಸನ್ಮಾನಿಸಲಾಯಿತು.
ಅಖಿಲ ಭಾರತ ಸಂತ ಸಮಿತಿಯ ಕೋಶಾಧಿಕಾರಿ ಮಹಾಬಲೇಶ್ವರ ಸರಸ್ವತಿ ಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ನಾಥ್ ಜೀ ಕೊಡಗು, ಸಂಘಟನಾ ಕಾರ್ಯದರ್ಶಿ ನಿಶ್ಚಲ ನಿರಂಜನ ದೇಸಿ ಕೇಂದ್ರ ಸ್ವಾಮೀಜಿ, ಕವಿ ಗುರುರಾಜ್ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.