ಮಂಗಳೂರು: ಫೆ.22ರಂದು ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ಗ್ರಾಮ ಸ್ವರಾಜ್ ಪ್ರತಿಷ್ಠಾನದ ಆಶ್ರಯದಲ್ಲಿ ಎರಡನೇ ಆವೃತ್ತಿಯ “ಹೊಂಬೆಳಕು“ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಅದರ ಟಿ-ಶರ್ಟ್ ಲಾಂಚ್ ಕಾರ್ಯಕ್ರಮ ಸೋಮವಾರ ನಡೆಯಿತು.
ಬಳಿಕ ಮಾತಾಡಿದ ಸಂಘಟನಾ ಸಮಿತಿ ಅಧ್ಯಕ್ಷ ಮಂಜುನಾಥ ಭಂಡಾರಿ ಅವರು, “ಕಾರ್ಯಕ್ರಮದ ಟಿ-ಶರ್ಟ್ ಅನ್ನು ಇಂದು ಲಾಂಚ್ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 355 ಗ್ರಾಮ ಪಂಚಾಯತ್ ನ 6082 ಮಂದಿ ಚುನಾಯಿತ ಸದಸ್ಯರಿದ್ದಾರೆ. 2000-2500 ಮಂದಿ ಪಂಚಾಯತ್ ನೌಕರರಿದ್ದಾರೆ. ಎಲ್ಲ ಚುನಾಯಿತ ಪ್ರತಿನಿಧಿಗಳು ಹಾಗೂ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲರನ್ನೂ ಆಹ್ವಾನಿಸಲಾಗಿದೆ. ಎಲ್ಲರನ್ನೂ ಒಂದೇ ವೇದಿಕೆಯಡಿಯಲ್ಲಿ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಒಟ್ಟು 353 ಗ್ರಾಮ ಪಂಚಾಯತ್ ಗಳಿದ್ದು ಶೇ.95ರಷ್ಟು ನೋಂದಣಿ ಪ್ರಕ್ರಿಯೆ ನಡೆದಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಇಲಾಖೆ ಎರಡೂ ಸೇರಿ ಕಾರ್ಯಕ್ರಮ ನಡೆಯಲಿದೆ. 8ರಿಂದ 10 ಸಾವಿರ ಮಂದಿ ಸೇರುವ ನಿರೀಕ್ಷೆಯಿದೆ. ಬೆಳಗ್ಗೆ 10 ಗಂಟೆಯಿಂದ ನಿರಂತರವಾಗಿ ಕಾರ್ಯಕ್ರಮಗಳು ನಡೆಯಲಿವೆ“ ಎಂದು ಮಾಹಿತಿ ನೀಡಿದರು.
”ಕಳೆದ ಬಾರಿ ಸಹ್ಯಾದ್ರಿ ಕ್ಯಾಂಪಸ್ ನಲ್ಲಿ ನಡೆದಿದ್ದ ಮೊದಲನೇ ಆವೃತ್ತಿಯ ಕಾರ್ಯಕ್ರಮದಲ್ಲಿ 6000ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿತ್ತು. ಹೀಗಾಗಿ ಮತ್ತದೇ ಉತ್ಸಾಹದಿಂದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರಲು ಒಪ್ಪಿಗೆ ಸೂಚಿಸಿದ್ದಾರೆ. ಅಧಿಕಾರಿಗಳನ್ನು ಹಾಗೂ ಪಕ್ಷ ಬೇಧವಿಲ್ಲದೆ ಎಲ್ಲ ಜನಪ್ರತಿನಿಧಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಲಾಗುವುದು“ ಎಂದರು.
ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ಶಿಸ್ತುಬದ್ಧ ಪ್ರಥಮ ತಂಡಕ್ಕೆ 50,000 ರೂ., ದ್ವಿತೀಯ 25,000 ರೂ. ಬಹುಮಾನ ನೀಡಲಾಗುವುದು. ಪಥ ಸಂಚಲನಕ್ಕೆ ನನ್ನ ಕನಸಿನ ಭಾರತ, ಗ್ರಾಮ ಸ್ವರಾಜ್ಯ ಹಾಗೂ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಥೀಮ್ ಅನ್ನು ನೀಡಲಾಗಿದೆ ಎಂದು ಹೇಳಿದರು.
ಸಂಘಟನೆಯ ಅಧ್ಯಕ್ಷ ಸುಭಾಷ್ಚಂದ್ರ ಶೆಟ್ಟಿ ಕುಳಾಲು, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕೋಶಾಧಿಕಾರಿ ಪ್ರವೀಣ್ ಚಂದ್ರ ಆಳ್ವ, ವಿರೋಧ ಪಕ್ಷದ ನಾಯಕ ಅನಿಲ್ ಕುಮಾರ್, ಕಾರ್ಯದರ್ಶಿ ಲಾರೆನ್ಸ್ ಮತ್ತಿತರರು ಉಪಸ್ಥಿತರಿದ್ದರು.