ವಿನಾಕಾರಣ ವ್ಯಕ್ತಿಯ ಕೊಲೆ: ಆರೋಪಿ ಪೊಲೀಸರ ಬಲೆಗೆ

ಕಾಸರಗೋಡು: ವಿನಾಕಾರಣ ಜಗಳವಾಡಿ ತನ್ನ ಪರಿಚಯದ ವ್ಯಕ್ತಿ, ಪಯ್ಯನ್ನೂರಿನ ಸುರೇಶ್ (45) ಎಂಬವರನ್ನು ಕೊಲೆ ಮಾಡಿದ ಆರೋಪಿ ಉಪ್ಪಳ ಪತ್ವಾಡಿಯ ಸವಾದ್ (23)ನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಕಟ್ಟಡ ಕಾರ್ಮಿಕ, ರಾತ್ರಿ ವೇಳೆ ಸೆಕ್ಯೂರಿಟಿಗಾರ್ಡ್ ಆಗಿ ಕಲಸ ಮಾಡುತ್ತಿದ್ದ ಸುರೇಶ್ ಹಾಗೂ ಸವಾದ್ ಇಬ್ಬರೂ ಒಬ್ಬರಿಗೊಬ್ಬರು ಪರಿಚಯಿಸ್ಥರಾಗಿದ್ದು, ಆಗಾಗ ಒಬ್ಬರಿಗೊಬ್ಬರು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು. ಕೆಲವೊಮ್ಮೆ ಹೋಟೆಲ್‌ಗೆ ಹೋಗಿ ಒಟ್ಟಿಗೆ ಊಟ ಮಾಡಿಕೊಂಡು ಬರುತ್ತಿದ್ದರು.

ಫೆ.11ರ ರಾತ್ರಿ ಇಬ್ಬರೂ ಉಪ್ಪಳದ ಬಸ್‌ಸ್ಟ್ಯಾಂಡ್ ಬಳಿ ಮಾತುಕತೆ ನಡೆಸುತ್ತಿದ್ದವರ ಮಧ್ಯೆ ವಿನಾಕಾರಣ ಜಗಳ ಉಂಟಾಗಿತ್ತು. ಕುಪಿತನಾದ ಸವಾದ್ ಸುರೇಶ್‌ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ.

ರಕ್ತದ ಮಡುವಲ್ಲಿ ಒದ್ದಾಡುತ್ತಿದ್ದ ಸುರೇಶ್‌ನನ್ನು ಸ್ಥಳೀಯರು ಉಪ್ಪಳ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಅಷ್ಟರಲ್ಲಿ ಸುರೇಶ್ ಮೃತಪಟ್ಟಿದ್ದ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಸವಾದ್‌ಗಾಗಿ ಹುಡುಕಾಡುತ್ತಿದ್ದರು. ಇಂದು ಸವಾದ್ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಸವಾದ್ ಆಂಬ್ಯುಲೆನ್ಸ್ ಕಳವು ಸೇರಿದಂತೆ ಮೂರಕ್ಕೂ ಅಧಿಕ ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!