“ಹಾಲು ಉತ್ಪಾದಕರ ಪ್ರೋತ್ಸಾಹ ಧನ 1.50 ಗೆ ಹೆಚ್ಚಳ“ -ಸುಚರಿತ ಶೆಟ್ಟಿ

ಮಂಗಳೂರು: “ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನೊಳಗೊಂಡಿರುತ್ತದೆ. ಪ್ರಸ್ತುತ 749 ಸಂಘಗಳು ಕಾರ್ಯಾಚರಿಸುತ್ತಿದ್ದು, 51138 ಸಕ್ರಿಯ ಸದಸ್ಯರಿಂದ ದಿನವಹಿ 3,40,158 ಲೀ. ಹಾಲು ಸಂಗ್ರಹಣೆಯಾಗುತ್ತಿದೆ. ಒಕ್ಕೂಟದ
ವ್ಯಾಪ್ತಿಯಲ್ಲಿ ಉಭಯ ಜಿಲ್ಲೆಯಲ್ಲಿ ಪ್ರಸ್ತುತ 16 ಪಶು ವೈದ್ಯಕೀಯ ಶಿಬಿರ ಕಛೇರಿಗಳು ಕಾರ್ಯಾಚರಣೆಯಲ್ಲಿದ್ದು, ತಜ್ಞ ಪಶುವೈದ್ಯರು ವಿಶೇಷಸಲಹಾ ಸೂಚನೆಗಳನ್ನು ನೀಡುತ್ತಿದ್ದಾರೆ.
ಒಕ್ಕೂಟದ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ದಿನವಹಿ ಸರಾಸರಿ 4.01 ಲಕ್ಷ ಲೀ. ಹಾಲು, 78000 ಕೆ.ಜಿ ಮೊಸರು, ಮಾಸಿಕ 75 ಟನ್ ಪನೀರ್, ತುಪ್ಪ 153 ಟನ್, 1 ಟನ್ ಒಕ್ಕೂಟದ ಸಿಹಿ ಉತ್ಪನ್ನ ಮತ್ತು ಸುವಾಸಿತ ಹಾಲು, 2 ಟನ್ ಕಹಾಮ ಸಿಹಿ ಉತ್ಪನ್ನ ಒಕ್ಕೂಟದಲ್ಲಿ ಮಾರಾಟವಾಗುತ್ತಿದೆ“ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


”ಕೊರತೆಯಾದ ಹಾಲನ್ನು ಅವಶ್ಯಕತೆಗನುಗುಣವಾಗಿ ಇತರ ಒಕ್ಕೂಟಗಳಿಂದ ಖರೀದಿಸಲಾಗುತ್ತಿದೆ.
ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಮೇವಿನ ಕೊರತೆ, ವಾತಾವರಣದ ಅಧಿಕ ಉಷ್ಣತೆ, ಪಶು ಆಹಾರದ ಕೊರತೆ ಮತ್ತು ಕೂಲಿ ಕಾರ್ಮಿಕರ ತೀವ್ರ ಅಭಾವದಿಂದ ಹೈನುಗಾರಿಕೆಯು ಕಷ್ಟ ಸಾಧ್ಯವಾಗಿದ್ದು, ಸಂಘಗಳ ಮುಖಾಂತರ ಹಾಲು ಶೇಖರಣೆಯು ಅಪೇಕ್ಷಿಸಿದಷ್ಟು ಅಭಿವೃದ್ಧಿಯಾಗದೆ ಇರುತ್ತದೆ. ಇದರಿಂದಾಗಿ ಸಂಘಗಳಲ್ಲಿ ಹಾಲು ಶೇಖರಣೆ ಕಡಿಮೆಯಾಗಿ ಸಂಘಗಳ ಲಾಭಾಂಶ
ಕಡಿಮೆಯಾಗುತ್ತಿದೆ. ಇದನ್ನು ಮನಗಂಡು ವಿಶೇಷ ಪ್ರೋತ್ಸಾಹಧನವನ್ನು 01.01.2025 ರಿಂದ ರೂ.1.00 ರಿಂದ ರೂ.1.50 ಗಳಿಗೆ ಹೆಚ್ಚಳ ಈ ಕೆಳಗಿನ ಬದಲಾವಣೆಯನ್ನು ಮಾಡಿ 30.11.2024 ರಂದು ಆಡಳಿತ ಮಂಡಳಿಯಲ್ಲಿ ನಿರ್ಣಯವಾಗಿರುವಂತೆ
ಮಾಡಲಾಗಿರುತ್ತದೆ. ಅದೇ ರೀತಿ 4.5 ಫ್ಯಾಟ್ ನಿಂದ 8.5 ಎಸ್ ಎನ್ ಎಫ್ ಗೆ ರೈತರಿಗೆ ನೀಡುವ ದರವನ್ನು 36.74ರಿಂದ 36.95ಕ್ಕೆ ಏರಿಸಲಾಗಿದೆ.
ಒಕ್ಕೂಟದ ವ್ಯಾಪ್ತಿಯಲ್ಲಿ ರಾಸುಗಳಿಗೆ ಅಗತ್ಯವಾಗಿ ಬೇಕಾಗಿರುವ ನಂದಿನಿ ಪಶು ಆಹಾರವು ಮಾಹೆಯಾನ ಸರಾಸರಿ 5500
ಮೆ.ಟನ್ ಪ್ರತಿ ಟನ್‌ಗೆ ರೂ.25300/- ರಂತೆ ಮಾರಾಟವಾಗುತ್ತಿದೆ. ಪಶು ಆಹಾರದ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿ
ಮಾಹೆಯಾನ ಪಶು ಆಹಾರದ ಮಾದರಿಯನ್ನು ಪರೀಕ್ಷಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಳ್ಳಲಾಗುತ್ತಿದೆ.
ಹೈನುಗಾರಿಕೆಗೆ ಪ್ರೋತ್ಸಾಹ ನೀಡಲು ಹಾಗೂ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಪ್ರಸ್ತುತ ಮಾಹೆಯಾನ 600 ಮೆ.ಟನ್ ರಸಮೇವನ್ನು ಸಂಘಗಳಿಗೆ ಪ್ರತಿ ಕೆ.ಜಿ.ಗೆ ರೂ.7.50 ರಂತೆ ಒದಗಿಸಲಾಗುತ್ತಿದೆ.
ಉತ್ತಮ ರಾಸುಗಳಿಗಾಗಿ ದಕ್ಷಿಣ ಭಾರತದ ಈರೋಡ್‌ನಲ್ಲಿ ಕಡಿಮೆ ದರದಲ್ಲಿ ಉತ್ತಮ ತಳಿಯ ಜಾನುವಾರುಗಳು ಲಭ್ಯವಿರುವುದನ್ನು ಗುರುತಿಸಿ ಹೈನುಗಾರರಿಗೆ ಅವರ ಬೇಡಿಕೆಗೆ ಅನುಗುಣವಾಗಿ ರಾಸುಗಳನ್ನು ಖರೀದಿಸಿ ವಿತರಿಸಲು ಕ್ರಮವಿಡಲಾಗುತ್ತಿದ್ದು, ಪ್ರತೀ ರಾಸುವಿಗೆ ರೂ.16000 ಗಳಷ್ಟು ಅನುದಾನವನ್ನು ರಾಸು ಸಾಗಾಣಿಕೆಗೆ, ವಿಮೆಗಾಗಿ, ಉಚಿತ ಪಶುಆಹಾರಕ್ಕಾಗಿ ನೀಡಲಾಗುತ್ತಿದೆ“ ಎಂದರು.
ಒಕ್ಕೂಟವು ಹೈನುಗಾರರ ಹಿತಾಸಕ್ತಿಯನ್ನು ಕಾಪಾಡಲು ಈಗಾಗಲೇ ವಿವಿಧ ಯೋಜನೆಗಳಾದ ರಾಸು ವಿಮೆ ಶೇ.75ರ
ಅನುದಾನದಲ್ಲಿ, ಹೆಣ್ಣು ಕರು ಸಾಕಾಣಿಕೆ ಯೋಜನೆ, ಹಸಿರು ಮೇವು ಯೋಜನೆ, ವಾಣಿಜ್ಯ ಡೇರಿ ಘಟಕ, ಹೊರ ಜಿಲ್ಲೆ/ರಾಜ್ಯದಿಂದ ರಾಸು ಖರೀದಿಸಿದಲ್ಲಿ ಸಾಗಾಣಿಕೆ ವೆಚ್ಚ ಹಾಲು ಹೆಚ್ಚಳ ಕಾರ್ಯಕ್ರಮ, ರೈತರು ಮರಣ ಹೊಂದಿದಾಗ, ದನ ಕಳ್ಳತನ, ಹಟ್ಟಿ ಹಾನಿಗೆ ಪರಿಹಾರ ಇತ್ಯಾದಿ ಅನುದಾನಗಳನ್ನು ಒಕ್ಕೂಟದ ಮೂಲಕ ನಿರಂತರ ನೀಡಲಾಗುತ್ತಿದೆ.
ಒಕ್ಕೂಟ ತನ್ನ ಸಂಪನ್ಮೂಲದಿಂದ ಹಾಲು ಹೆಚ್ಚಳ ಕಾರ್ಯಕ್ರಮದಡಿ ಹೈನುಗಾರರಿಗೆ 4.88 ಕೋಟಿ, ರೂ.1/- ಪ್ರೋತ್ಸಾಹ ಧನದಂತೆ ರೂ.9.46 ಕೋಟಿ, ಗುಣಮಟ್ಟಕ್ಕೆ ಪ್ರೋತ್ಸಾಹ ಧನ ಮತ್ತು ಸಂಘದ ಸಿಬ್ಬಂದಿ ಪ್ರೋತ್ಸಾಹ ಧನ ರೂ.3.16 ಕೋಟಿ, ರಾಸು ವಿಮೆಗಾಗಿ
ಒಕ್ಕೂಟದಿಂದ ರೂ.3 ಕೋಟಿಗಳಷ್ಟು ಅನುದಾನ ನೀಡಲಾಗಿರುತ್ತದೆ.
ಡಿಸೆಂಬರ್ ಮಾಹೆಯ ಅಂತ್ಯದವರೆಗೆ ಅಂದಾಜು 870 ಕೋಟಿಯಷ್ಟು ವ್ಯವಹಾರ ಮಾಡಿ, 7.76 ಕೋಟಿ ಲಾಭ ಗಳಿಸುವ
ನಿರೀಕ್ಷೆಯಿರುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಹಾಲು ಒಕ್ಕೂಟದ ಎಂ.ಡಿ.ವಿವೇಕ್ ಡಿ., ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಜಯರಾಮ್ ರೈ,ದಿವಾಕರ್ ಶೆಟ್ಟಿ ಕಾಪು, ಒಕ್ಕೂಟದ ನಿರ್ದೇಶಕರಾದ ನಾರಾಯಣ ಪ್ರಕಾಶ್, ಮಹಿಳಾ ಪ್ರತಿನಿಧಿ ಸವಿತಾ ಶೆಟ್ಟಿ, ಸದಾಶಿವ ಶೆಟ್ಟಿ, ನರಸಿಂಹ ಕಾಮತ್, ಸುಧಾಕರ್ ರೈ, ಮಾಜಿ ಅಧ್ಯಕ್ಷ ರವಿರಾಜ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!