“ಬೆಳ್ತಂಗಡಿ ಶಾಸಕರಿಗೆ ಕಬಡ್ಡಿ ಮೇಲೆ ಆಸಕ್ತಿಯಿದ್ದರೆ ಬೆಳ್ತಂಗಡಿಯಲ್ಲಿ ಸ್ಟೇಡಿಯಂ ಮಾಡಲಿ”

ಯುವಜನತೆಗೆ ಉದ್ಯೋಗ ಕಲ್ಪಿಸಲು ವಿಧಾನಸಭೆಯಲ್ಲಿ ಯಾಕೆ ಧ್ವನಿ ಎತ್ತುತ್ತಿಲ್ಲ?”.

-ರಾಕೇಶ್ ಮಲ್ಲಿ ವಾಗ್ದಾಳಿ

ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸತತವಾಗಿ ನಾಲ್ಕು ವರ್ಷಗಳಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸುಮಾರು ಎರಡು ದಶಕಗಳ ಕಾಲ ಜಿಲ್ಲೆಯಿಂದ ಅನೇಕ ಕಬಡ್ಡಿ ಪಟುಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಳುಹಿಸಿದ ಕೀರ್ತಿ ನಮ್ಮ ಸಂಸ್ಥೆಯದ್ದಾಗಿದೆ. ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಅವರನ್ನು ಕಳುಹಿಸಿದ್ದು ನಮ್ಮ ಸಂಸ್ಥೆಯಾಗಿದೆ. ಇಷ್ಟೆಲ್ಲ ಇದ್ದರೂ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಸದನದಲ್ಲಿ ನಮ್ಮ ಸಂಸ್ಥೆಯ ಬಗ್ಗೆ ಸುಳ್ಳು ಮಾಹಿತಿ ನೀಡಿರುವುದು ಖಂಡನೀಯ. ಇದರ ವಿರುದ್ಧ ಸಭಾಪತಿಗಳು ಕ್ರಮ ಕೈಗೊಳ್ಳಬೇಕು. ನಮ್ಮ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದುಕೊಂಡು ತಪ್ಪು ಮಾಹಿತಿ ನೀಡಿರುವುದು ಸರಿಯಲ್ಲ“ ಎಂದು ಸಂಘಟನೆಯ ಅಧ್ಯಕ್ಷ ರಾಕೇಶ್ ಮಲ್ಲಿ ಪತ್ರಿಕಾಗೋಷ್ಟಿಯಲ್ಲಿ ವಾಗ್ದಾಳಿ ನಡೆಸಿದರು.


2022ರಲ್ಲಿ ಬೆಳ್ತಂಗಡಿ ತಾಲೂಕಿನ ಎಸ್ ಡಿಎಂ ಕಾಲೇಜ್, 2023ರಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ನಡೆದ ಜ್ಯುನಿಯರ್ 10 ದಿನಗಳ ತರಬೇತಿ ಶಿಬಿರಗಳಿಗೆ ಒಂದು ದಿನವೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಹರೀಶ್ ಪೂಂಜಾ ಬರಲಿಲ್ಲ. ಬಂಟ್ವಾಳ ಮದ್ವದಲ್ಲಿ ನಡೆದ ಸಬ್ ಜ್ಯುನಿಯರ್ ಬಾಲಕ ಬಾಲಕಿಯರ ಶಿಬಿರಕ್ಕೂ ಭೇಟಿ ಕೊಟ್ಟಿಲ್ಲ. ನಮ್ಮ ಸಂಘಟನೆಯು ಪಕ್ಷ, ಜಾತಿ, ಧರ್ಮ ರಹಿತವಾಗಿದ್ದು ಹರೀಶ್ ಪೂಂಜಾರಿಗೆ ಕಬಡ್ಡಿ ಬಗ್ಗೆ ಅಷ್ಟು ಕಾಳಜಿಯಿದ್ದರೆ ಬೆಳ್ತಂಗಡಿಯಲ್ಲಿ ಕನಿಷ್ಟ ಇಂಡೋರ್ ಕ್ರೀಡಾಂಗಣವನ್ನಾದರೂ ಮಾಡಲಿ ಎಂದರು.


ನಮಗೆ ಕೇಂದ್ರ, ರಾಜ್ಯ ಸರಕಾರದಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ. ಸಾರ್ವಜನಿಕರ ಸಹಕಾರ, ಶಿಕ್ಷಣ ಸಂಸ್ಥೆಗಳ ಬೆಂಬಲದಿಂದ ನಮ್ಮ ಸಂಘಟನೆ ನಡೆಯುತ್ತಿದೆ. ಉರ್ವಾದಲ್ಲಿ ಸಂಸದರ, ಶಾಸಕರ ಹಾಗೂ ಮಾಜಿ ಶಾಸಕರ ಸಹಕಾರ ಹಾಗೂ ಸ್ಮಾರ್ಟ್ ಸಿಟಿ ವತಿಯಿಂದ 35 ಕೋಟಿ ರೂಪಾಯಿ ವೆಚ್ಚದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಬೆಳ್ತಂಗಡಿ ಶಾಸಕರು ಯುವಜನತೆಗೆ ಉದ್ಯೋಗ ಕೊಡಿಸಲು ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತಿಲ್ಲ. ಕಬಡ್ಡಿ ಕ್ರೀಡೆಗೆ ವ್ಯವಸ್ಥೆ ಕಲ್ಪಿಸಲು ಮುಂದಾಗಿಲ್ಲ. ಯಾವುದೇ ಮಾಹಿತಿಯಿಲ್ಲದೇ ಸುಳ್ಳು ಆರೋಪ ಮಾಡುವುದು ಅವರ ಘನತೆಗೆ ತಕ್ಕುದಲ್ಲ. ಅವರ ವಿರುದ್ಧ ಸಭಾಪತಿ ಮಾತ್ರವಲ್ಲ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳು, ಸಚಿವರಿಗೆ ದೂರು ನೀಡಲಾಗುವುದು ಎಂದರು.
ಸಂಘಟನೆಯ ಗೌರವ ಅಧ್ಯಕ್ಷ ಅಮರ್ ನಾಥ್ ರೈ, ಗೌರವ ಸಲಹೆಗಾರ ಪುರುಷೋತ್ತಮ್ ಪೂಜಾರಿ, ಮಂಗಳೂರು ತಾಲೂಕು ಅಧ್ಯಕ್ಷ ಚಂದ್ರಶೇಖರ, ದಿನಕರ್ ಶೆಟ್ಟಿ, ಮೋಹಿತ್ ಸುವರ್ಣ, ಸತೀಶ್ ಪೂಜಾರಿ ಅಶೋಕನಗರ, ರವಿ ಉರ್ವ ಮತ್ತಿತರರು ಉಪಸ್ಥಿತರಿದ್ದರು

error: Content is protected !!