ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ಎಂದೇ ಕರೆಯಲ್ಪಡುವ ನೇತ್ರಾವತಿ ನದಿಯಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಅಕ್ರಮ ಮರಳುಗಾರಿಕೆ ನಡೀತಿದೆ. ಸಕ್ರಮ ಮರಳು ವ್ಯಾಪಾರ ಮಾಡುವವರು ಕೂಡಾ ಪರ್ಮಿಟ್ ಪಡೆದ ಸುತ್ತಮುತ್ತಲಿನ ಹತ್ತಾರು ಕಡೆಗಳಲ್ಲಿ ಮರಳು ದಕ್ಕೆ ನಿರ್ಮಿಸಿ ಅಕ್ರಮ ದಂಧೆ ನಡೆಸ್ತಾ ಇರೋದು ಗುಟ್ಟಾಗಿ ಉಳಿದಿಲ್ಲ. ಬಂಟ್ವಾಳ ತಾಲೂಕಿನ ತುಂಬೆಯಲ್ಲಂತೂ ಮರಳು ದಂಧೆ ಯಾವ ಮಟ್ಟಕ್ಕೆ ನಡೆಯುತ್ತಿದೆ ಅಂದ್ರೆ ದೂರು ಕೊಟ್ಟರೂ ಇಲ್ಲಿಗೆ ಹೋಗಲು ಯಾವ ಅಧಿಕಾರಿಯೂ ಧೈರ್ಯ ಮಾಡುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ತುಂಬೆ ಜಂಕ್ಷನ್ ಅನತಿ ದೂರದಲ್ಲಿ ಮರಳು ಅಡ್ಡೆಯಿದ್ದು ನೇತ್ರಾವತಿ ನದಿಯಲ್ಲಿ ಡ್ರೆಜ್ಜಿಂಗ್ ಮೆಷಿನ್, ದೋಣಿ, ಜೆಸಿಬಿ ಬಳಸಿ ಮರಳು ತೆಗೆಯಲಾಗುತ್ತಿದೆ. ಇಲ್ಲಿಂದ ದಿನವೊಂದಕ್ಕೆ ಸಂಜೆಯಾಗುತ್ತಿದ್ದಂತೆ ನೂರಾರು ಲೋಡ್ ಮರಳು ಹೊರಗಡೆ ಹೋಗುತ್ತದೆ. ಲಾರಿಗಳ ಆರ್ಭಟಕ್ಕೆ ಒಳರಸ್ತೆ ಸಂಪೂರ್ಣ ಹಾಳೆದ್ದು ಹೋಗಿದೆ. ಹೆದ್ದಾರಿ ಪಕ್ಕದಲ್ಲೇ ಮನೆಯೊಂದಕ್ಕೆ ಸಿಸಿ ಕೆಮರಾ ಅಳವಡಿಸಿ ರಸ್ತೆಯಲ್ಲಿ ಹೋಗುವ ಸಂಶಯದ ವಾಹನಗಳನ್ನು ಜನರನ್ನು ಗುರುತಿಸುವ ಬೆದರಿಸುವ ಕೆಲಸವೂ ನಡೆಯುತ್ತಿದೆಯಂತೆ. ಒಂದೊಮ್ಮೆ ಅಧಿಕಾರಿಗಳು ಬಂದರೆ ಸಿಸಿ ಕೆಮರಾ ಮೂಲಕ ತಿಳಿದುಕೊಂಡು ಸ್ಥಳದಲ್ಲಿ ಏನೂ ಸಿಗದಂತೆ ಮಾಡುವಷ್ಟು ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆಯಂತೆ.
ತುಂಬೆ ಪರಿಸರದಲ್ಲಿ ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳು ದಂಧೆಯಿಂದ ನದಿಯಲ್ಲಿ ಭಾರೀ ಗಾತ್ರದ ಕುಳಿಗಳು ಬಿದ್ದಿವೆ. ಇದು ಮುಂದೆ ಪ್ರಾಕೃತಿಕ ವಿಕೋಪಕ್ಕೂ ಕಾರಣವಾಗಬಹುದು. ಇಲ್ಲಿ ನಡೆಯುತ್ತಿರುವ ದಂಧೆ ಕುರಿತು ಸಂಬಂಧಪಟ್ಟ ಇಲಾಖೆ, ಪೊಲೀಸರಿಗೆ ಮಾಹಿತಿ ಇದೆ. ಆದರೆ ಇದರ ಹಿಂದೆ ಪ್ರಭಾವಿ ಕಾಂಗ್ರೆಸ್ ನಾಯಕರು ಇರುವುದು ಅವರ ಕೈ ಕಟ್ಟಿ ಹಾಕಿದೆಯಂತೆ. ಸ್ಥಳೀಯ ಬಿಜೆಪಿ ನಾಯಕರು ಕೂಡ ಇದರಲ್ಲಿ “ಪಾಲು” ಪಡೆಯುತ್ತಿದ್ದು ನದಿ, ನೀರು, ಜನರ ಜೀವನ ಹಾಳಾಗಿ ಹೋದರೆ ನಮಗೇನು ಎಂದು ಹಣ ಎಣಿಸುವುದರಲ್ಲಿ ಬ್ಯುಸಿ ಆಗಿದ್ದಾರೆ ಎಂಬ ಮಾಹಿತಿ ಇದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆಯ ವಿರುದ್ಧ ನಿರಂತರ ಕಾರ್ಯಾಚರಣೆ ಯಾವಾಗ ನಡೆಯುತ್ತೆ ಅಂತ ಜನ ಕಾಯುತ್ತಿದ್ದಾರೆ.