ಮಂಗಳೂರು: ಮುಂದಿನ ನವೆಂಬರ್ 14ರಿಂದ 18ರವರೆಗೆ ಪಿಲಿಕುಳ ನಿಸರ್ಗಧಾಮದಲ್ಲಿ “ಪಿಲಿಕುಳೋತ್ಸವ” ಅಥವಾ “ತುಳುನಾಡೋತ್ಸವ” ಹೆಸರಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಮಕ್ಕಳ ಹಬ್ಬ, ಕೃಷಿ ಮತ್ತು ಜಾನುವಾರು ಮೇಳ, ಕೆಸರುಗದ್ದೆಯಲ್ಲಿ ಜಿಲ್ಲಾಮಟ್ಟದ ಜಾನಪದ
ಕ್ರೀಡೆ ಹಾಗೂ ಕಂಬಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ವಿಧಾನ ಪರಿಷತ್ ಶಾಸಕ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿರುವ ಎನ್.ಎಸ್. ಭೋಸರಾಜು ಅವರಿಗೆ ಮಾಡಿರುವ ಮನವಿಯಲ್ಲಿ ಪಿಲಿಕುಲ ನಿಸರ್ಗಧಾಮ ಅಭಿವೃದ್ಧಿಯ ನಿಟ್ಟಿನಲ್ಲಿ ಸರಕಾರದ ಗಮನವನ್ನು ಸೆಳೆಯಲಾಗಿದೆ. ಪಿಲಿಕುಲ ಅಭಿವೃದ್ಧಿ ಪ್ರಾಧಿಕಾರಕ್ಕೆ ಇನ್ನೂ ಸದಸ್ಯರನ್ನು ನೇಮಕ ಮಾಡದೇ ಇರುವುದರಿಂದ ಕೂಡಲೇ
ಸದಸ್ಯರನ್ನು ನೇಮಕಮಾಡಿ ಪ್ರಾಧಿಕಾರವನ್ನು ಸದೃಢಗೊಳಿಸಬೇಕು, ನಿಸರ್ಗಧಾಮದ ವ್ಯಾಪ್ತಿಯಲ್ಲಿ ಹಲವಾರು ಕಟ್ಟಡಗಳು ನಿರ್ಮಾಣವಾಗಿದ್ದು ಹಾಗೂ ಪೂರ್ಣಗೊಳ್ಳದೆ ಸಮರ್ಪಕ ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದಿದೆ ಎಂಬುದಾಗಿ ಮಾಧ್ಯಮಗಳ ಮೂಲಕ ತಿಳಿದು ಬಂದಿದ್ದು ಇದನ್ನು ಕೂಲಕುಂಷವಾಗಿ ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು.
ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುತ್ತಿಲ್ಲವೆಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈ ಬಗ್ಗೆ ಪರಿಶೀಲಿಸಿ ಮೃಗಾಲಯ ಸುಧಾರಣೆಗೆಗೆ ಕ್ರಮ ವಹಿಸುವಂತೆ ಮತ್ತು ಪ್ರವಾಸಿಗರ ಸಂಖ್ಯೆ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕಾಗಿದೆ ಎಂದು ಶಾಸಕರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಪಿಲಿಕುಳ ಉದ್ಯಾನವನ ಹಾಗೂ ಶೌಚಾಲಯಗಳ ನಿರ್ವಾಹಣೆ ಸರಿಯಾಗಿಲ್ಲವೆಂದು ಹಾಗೂ ಅಲ್ಲಿ ನಿರ್ವಾಹಣೆ ಮಾಡಲು ಅಗತ್ಯದಷ್ಟು ಸಿಬ್ಬಂದಿ ಇಲ್ಲವೆಂದು ತಿಳಿದುಬಂದಿರುತ್ತದೆ.
ಈ ಮೇಲಿನ ಎಲ್ಲಾ ಅಂಶಗಳಿಗೆ ಸಂಬಂಧಿಸಿದಂತೆ ಕೂಡಲೆ ಸಂಬಧಪಟ್ಟ ಅಧಿಕಾರಿಗಳಿಗೆ ಸರಿಪಡಿಸುವಂತೆ
ನಿರ್ದೇಶನವನ್ನು ನೀಡಬೇಕು ಹಾಗೂ ಚುನಾಯಿತ ಜನಪ್ರತಿನಿಧಿಗಳ ಸಭೆ ಕರೆದು “ಪಿಲಿಕುಳೋತ್ಸವ” ಅಥವಾ
“ತುಳುನಾಡೋತ್ಸವ” ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.