ಕರಾವಳಿ ಜಿಲ್ಲೆಗಳಲ್ಲಿ ಡ್ರಗ್ಸ್, ಕಾನೂನು ಬಾಹಿರ ಚಟುವಟಿಕೆ ತಡೆಯಲು ಶಾಸಕ ಮಂಜುನಾಥ್ ಭಂಡಾರಿ ಒತ್ತಾಯ

ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಕಠಿಣ
ಕ್ರಮ ಜರುಗಿಸುವ ಕುರಿತು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಕಾನೂನು ಬಾಹಿರ
ಚಟುವಟಿಕೆಗಳು ನಡೆಯುತ್ತಿದ್ದು ಡ್ರಗ್ಸ್ ಮಾಫಿಯಾದ ಹಾವಳಿಯೂ ಹೆಚ್ಚಾಗಿದೆ. ಅತ್ಯಾಚಾರ ಪ್ರಕರಣಗಳಲ್ಲಿ ಇದರ ಪಾತ್ರ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳಲ್ಲಿ ಅತ್ಯಾಚಾರ, ಕೊಲೆ, ದರೋಡೆ,
ಡಕಾಯತಿ ಇತ್ಯಾದಿ ಗಂಭೀರ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ವಿವಿಧ ಮಾದ್ಯಮಗಳಲ್ಲಿ
ವರದಿಯಾಗುತ್ತಿದೆ. ಹೀಗಾಗಿ ರಾಜ್ಯ ಗೃಹ ಇಲಾಖೆ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಶಾಸಕರು ಮನವಿ ಮಾಡಿದ್ದಾರೆ.
ಕರಾವಳಿ ಭಾಗದಲ್ಲಿ ಮಾದಕ ವ್ಯಸನದಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗುತ್ತಿದ್ದಾರೆ. ಆಕ್ರಮ ಚಟುಚಟಿಕೆಗಳಾದ ಇಸ್ಪೀಟು, ಮಟ್ಕಾ ಇತ್ಯಾದಿಗಳ ಹಾವಳಿ ಹೆಚ್ಚಾಗಿರುತ್ತದೆ. ಆದ್ದರಿಂದ ಕರಾವಳಿ ಭಾಗದಲ್ಲಿ ಮಾದಕ ವ್ಯಸನ ಸಹಿತ ಎಲ್ಲಾ ಕಾನೂನು ಬಾಹಿರ ಚಟುವಟಿಕೆಗಳನ್ನು, ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ತಡೆಯಲು ಗೃಹ ಇಲಾಖೆ ಹಾಗೂ ಕರಾವಳಿಯ ಪೋಲಿಸ್ ವಿಭಾಗದ ಮೂಲಕ ಕಠಿಣ ಕ್ರಮಗಳನ್ನು ಜರುಗಿಸುವಂತೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಒತ್ತಾಯಿಸಿದ್ದಾರೆ.

error: Content is protected !!