ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ “ಬಾವಾ” ಕಣಕ್ಕೆ!? ಮಂಗಳೂರು ಕ್ಷೇತ್ರದಿಂದ ಸ್ಪರ್ಧೆ?

ಮಂಗಳೂರು: ಮುಂದಿನ ವಿಧಾನಸಭಾ ಚುನಾವಣೆಗೆ ಈಗಲೇ ಪೂರ್ವಸಿದ್ಧತೆ ಆರಂಭಗೊಂಡಿದ್ದು ಈಗಾಗಲೇ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಪಕ್ಷ ಮೈತ್ರಿ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಹಿರಿಯ ಕಾಂಗ್ರೆಸ್ ನಾಯಕ ಮೊಯಿದೀನ್ ಬಾವಾ ಅವರನ್ನು ಹಿಂದಿನ ಉಳ್ಳಾಲ ಈಗಿನ ಮಂಗಳೂರು ಕ್ಷೇತ್ರದಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆದಿದೆ ಎಂದು ಬಲ್ಲಮೂಲಗಳು ಹೇಳಿವೆ.
ಈಗಾಗಲೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವ ಬಾವಾ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕರೆಸಿ ಸುರತ್ಕಲ್ ಭಾಗದಲ್ಲಿ ಸಮಾವೇಶ ನಡೆಸಿ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಇನ್ನೊಂದೆಡೆ ಬಿಜೆಪಿ ರಾಜ್ಯ ನಾಯಕರ ಜೊತೆಯಲ್ಲೂ ಬಾವಾ ಚೆನ್ನಾಗಿದ್ದಾರೆ. ಸದ್ಯ ರಾಜಕೀಯ ಲೆಕ್ಕಾಚಾರಕ್ಕಾಗಿ ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಮಂಗಳೂರು ಕ್ಷೇತ್ರದಿಂದ ಈಗಿನ ಶಾಸಕ, ಸ್ಪೀಕರ್ ಖಾದರ್ ಅವರನ್ನು ಎದುರಿಸಲು ಬಾವಾ ಸಮರ್ಥ ಅಭ್ಯರ್ಥಿ ಎಂದು ಎರಡೂ ಪಕ್ಷಗಳ ವತಿಷ್ಠರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಾವಾ ಮೂಲಕ ಖಾದರ್ ಭದ್ರಕೋಟೆಗೆ ಲಗ್ಗೆ ಹಾಕಲು ಎರಡೂ ಪಕ್ಷಗಳು ಯೋಚನೆ ಮಾಡಿದ್ದು ಈಗಾಗಲೇ “ಸಿದ್ಧತೆ” ಮಾಡಿಕೊಳ್ಳುವಂತೆ ಬಾವಾರಿಗೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ಕಳೆದ ಚುನಾವಣೆಯಲ್ಲಿ ಬಾವಾ ಮಂಗಳೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ತಯಾರಿಯು ನಡೆದಿತ್ತು, ಉಳ್ಳಾಲ ಭಾಗದಲ್ಲಿ ಬಾವಾ ಫ್ಲೆಕ್ಸ್ ಗಳು ರಾರಾಜಿಸಿದ್ದವು. ಆದರೆ ನಂತರ ಮಂಗಳೂರು ಉತ್ತರ ಕ್ಷೇತ್ರದಲ್ಲೇ ಬಾವಾ ಸ್ಪರ್ಧಿಸಿ ಸೋಲು ಕಂಡಿದ್ದರು.

error: Content is protected !!