ಮಂಗಳೂರು: “ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ದ.ಕ. ಜಿಲ್ಲೆಯ ಒಂದು ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯಾಗಿದೆ. ಕಳೆದ ಹಲವು ವರ್ಷಗಳಲ್ಲಿ ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ರಕ್ತದ ಅವಶ್ಯಕತೆಯಿಂದ ಜೀವನ್ಮರಣ ಹೋರಾಟ ಮಾಡುತ್ತಿರುವವರಿಗೆ ರಕ್ತ ಒದಗಿಸಿ ಸಾವಿರಾರು ಮಂದಿಗೆ ಜೀವದಾನ ನೀಡಿ ಅನೇಕ ಕುಟುಂಬದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ. ನಮ್ಮ ಸಮಾಜ ಸೇವಾ ಚಟುವಟಿಕೆಗಳಿಗೆ ಇನ್ನಷ್ಟು ವೇಗವನ್ನು ನೀಡುವ ಉದ್ದೇಶದಿಂದ ವಾಯ್ಸ್ ಆಫ್ ಟ್ರಸ್ಟ್ ಎಂಬ ಹೆಸರಿನಲ್ಲಿ ಸಹಸಂಸ್ಥೆಯನ್ನು ಹುಟ್ಟು ಹಾಕಿದ್ದು ಇದರ ಮೂಲಕ ಬಡಜನರ ಸೇವೆಯನ್ನು ಬಹಳ ಪರಿಣಾಮಕಾರಿಯಾಗಿ ಮಾಡಬೇಕು, ಹಸಿದವರ ಹೊಟ್ಟೆ ತಣಿಸುವ ಕೆಲಸ, ಅಶಕ್ತ ಅನಾರೋಗ್ಯ ಪೀಡಿತರಿಗೆ ನಮ್ಮ ಕೈಯ್ಯಲ್ಲಾದ ನೆರವು ನೀಡಬೇಕು, ಬಡ ಹೆಣ್ಣುಮಕ್ಕಳ ಕಣ್ಣೀರು ಒರೆಸಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ” ಎಂದು ಸಂಘಟನೆಯ ನಿಕಟಪೂರ್ವ ಅಧ್ಯಕ್ಷ ಓಸ್ವಾಲ್ಡ್ ಫುರ್ಟಾಡೋ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ರಕ್ತದಾನ ಮಾತ್ರವಲ್ಲದೆ ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಚಿಕಿತ್ಸೆಗೆ ಬೇಕಾಗುವ ಎಲ್ಲಾ ರೀತಿಯ ನೆರವಿನ ಸಹಿತ ಆರ್ಥಿಕವಾಗಿ ಹಿಂದುಳಿದವರಿಗೆ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಲಭ್ಯವಿದೆ. ವಿಕಲ ಚೇತನರಿಗೆ ಬೇಕಾಗುವ ವೀಲ್ ಚೆಯರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಮುಂತಾದ ಪರಿಕರಗಳನ್ನು ನಿರಂತರವಾಗಿ ನೀಡುತ್ತಾ ಬಂದಿದೆ. ಬಡಹೆಣ್ಣುಮಕ್ಕಳ ಮದುವೆಗೆ ಬೇಕಾಗುವ ಗುಣಮಟ್ಟದ ಸೀರೆ, ಚೂಡಿದಾರ, ವಾಚ್ ಇತ್ಯಾದಿಗಳನ್ನು ನೀಡುತ್ತಾ ಬಡ ಹೆಣ್ಣುಮಕ್ಕಳ ತಂದೆ ತಾಯಂದಿರ ಸಂಕಷ್ಟಕ್ಕೆ ನೆರವಾಗುವ ಕೆಲಸವನ್ನು ಮಾಡುತ್ತಾ ಬಂದಿದೆ” ಎಂದು ಹೇಳಿದರು.
ಬಳಿಕ ಮಾತಾಡಿದ ಸಂಘಟನೆಯ ಸ್ಥಾಪಕಾಧ್ಯಕ್ಷ ರವೂಫ್ ಬಂದರ್ ಅವರು, “ಸಂಘಟನೆಯ ನೂತನ ಅಧ್ಯಕ್ಷರಾಗಿ ಉದ್ಯಮಿ, ಕೊಡುಗೈ ದಾನಿ ಝಹೀರ್ ಅಬ್ಬಾಸ್ ರವರನ್ನು ಆಯ್ಕೆ ಮಾಡಲಾಗಿದೆ. ಝಹೀರ್ ಅಬ್ಬಾಸ್ ರವರು ಬಡವರ ಬಗ್ಗೆ ಕನಿಕರ ಉಳ್ಳ ಓರ್ವ ಪ್ರಾಮಾಣಿಕ ಹಾಗೂ ಯಾವುದೇ ಕೆಲಸಕಾರ್ಯವನ್ನು ಅಚ್ಚುಕಟ್ಟಾಗಿ ಮಾಡುವ ಸಮರ್ಥ ವ್ಯಕ್ತಿಯಾಗಿದ್ದಾರೆ. ಈಗಾಗಲೇ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಚಾಲಕರಾಗಿದ್ದುಕೊಂಡು ಸ್ವಂತ ಖರ್ಚಿನಿಂದ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ” ಎಂದರು.
ನೂತನ ಅಧ್ಯಕ್ಷ ಝಹೀರ್ ಅಬ್ಬಾಸ್ ಮಾತಾಡಿ, “ಸಂಘಟನೆಯ ಪದಗ್ರಹಣ ಸಮಾರಂಭ ಇದೇ ಬರುವ ಸೆ.20ರಂದು ನಗರದ ರಾವ್ ಆಂಡ್ ರಾವ್ ಸರ್ಕಲ್ ಬಳಿಯಿರುವ ಸಿಟಿ ಟವರ್ ನ ಆವರಣದಲ್ಲಿ ನೆರವೇರಲಿದೆ. ಆ ದಿನ ಅನ್ನದಾನ, ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ವಿಕಲ
ಚೇತನರಿಗೆ ವೀಲ್ ಚೆಯರ್, ವಾಕರ್, ವಾಕಿಂಗ್ ಸ್ಟಿಕ್, ವಾಟರ್ ಬೆಡ್, ಮುಂತಾದ ಪರಿಕರಗಳ ವಿತರಣೆ ಹಾಗೂ ಒಬ್ಬ ಬಡಹೆಣ್ಣಿನ ಮದುವೆಯ ಸಂಪೂರ್ಣ ಖರ್ಚು ವೆಚ್ಚ ನೀಡುವಿಕೆ ಅಲ್ಲದೆ ಅದೇ ದಿನ
ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇದರ 6ನೇ ವಾರ್ಷಿಕೋತ್ಸವ ಹಾಗೂ ಟ್ರಸ್ಟಿನ ಉದ್ಘಾಟನೆ ನೆರವೇರಲಿದೆ” ಎಂದರು.
ಅಂದಿನ ಸಮಾರಂಭದಲ್ಲಿ ಶೈಖನಾ ಸೈಫುಲ್ಲಾಹಿ ಮುಹಮ್ಮದ್ ಬಶೀರ್ ವಲಿಯುಲ್ಲಾಹಿ, ವೈ.ಪಿ.ಎಲ್.ಅಹ್ಮದ್
ಮೊಹಿದಿನ್ ಲೆಬೈ ಮುತ್ತುಪೇಟೆ ಮತ್ತು ಶೈಖ್ ಮುಹಮ್ಮದ್ ಇರ್ಫಾನಿ ಫೈಝಿ ಅಲ್-ಅಝ್ ಹರಿ, ರಾಕಿ ಡಿಕುನ್ಹ ಮತ್ತಿತರ ಹೆಸರಾಂತ ಧಾರ್ಮಿಕ ಮುಖಂಡರು ಮತ್ತು ಶಾಸಕ ಡಿ.ವೇದವ್ಯಾಸ್ ಕಾಮತ್, ಮಾಜಿ ಶಾಸಕ ಜೆ.ಆರ್
ಲೋಬೋ, ಐವನ್ ಡಿ. ಸೋಜಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನೂತನ ಅಧ್ಯಕ್ಷ ಝಹಿರ್ ಅಬ್ಬಾಸ್, ಸ್ಥಾಪಕಾಧ್ಯಕ್ಷ ರವೂಫ್ ಬಂದರ್, ನಿಕಟಪೂರ್ವ ಅಧ್ಯಕ್ಷ ಓಸ್ವಾಲ್ಡ್ ಫುರ್ಟಾಡೋ, ಪ್ರಧಾನ ಕಾರ್ಯದರ್ಶಿ ಅಲಿಷಾ, ಆರಿಸ್, ಸಲಹೆಗಾರ ಹುಸೇನ್ ಕಾಟಿಪಳ್ಳ ಮತ್ತಿತರರು ಉಪಸ್ಥಿತರಿದ್ದರು.