ಮೂಲ್ಕಿ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನೂತನ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಹಲವರ ಹೆಸರು ಚಾಲ್ತಿಯಲ್ಲಿದ್ದು ತುಳುನಾಡ ಜಾನಪದ ಕಲೆ, ಸಂಸ್ಕೃತಿಯನ್ನು ಪ್ರಚುರಪಡಿಸುವಲ್ಲಿ ತಮ್ಮದೇ ಆದ ಕಾರ್ಯ ನಿರ್ವಹಿಸುತ್ತ ಬಂದಿರುವ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅವರನ್ನು ಆಯ್ಕೆ ಮಾಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.
ಕಿಶೋರ್ ಶೆಟ್ಟಿ ಅವರು ಕಲೆ, ಸಾಹಿತ್ಯ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದು ದೈವಾರಾಧನೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅವರ ದೈವದ ನುಡಿಗಟ್ಟು ತುಳು ಭಾಷೆ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದು ಅವರನ್ನು ತುಳು ಅಕಾಡೆಮಿ ಅಧ್ಯಕ್ಷರನ್ನಾಗಿ ಮಾಡಿದಲ್ಲಿ ತುಳು ಭಾಷೆಗೆ ಉನ್ನತ ಸ್ಥಾನಮಾನ ಸಿಗುವುದು ನಿಶ್ಚಿತ ಎಂದು ದಿನೇಶ್ ಸುವರ್ಣ ಬೆಳ್ಳಾಯರು ಅವರು ಬೆಂಬಲಿಗರ ಪರವಾಗಿ ಒತ್ತಾಯಿಸಿದ್ದಾರೆ. ಕೇವಲ ರಾಜಕೀಯ ಹಿನ್ನೆಲೆ ಇರುವವರನ್ನು ಆರಿಸುವ ಬದಲು ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಉಪಾಧ್ಯಕ್ಷರು ಆಗಿರುವ ಕಿಶೋರ್ ಶೆಟ್ಟಿ ಅವರಂತಹ ತುಳು ಭಾಷೆ, ಸಂಸ್ಕೃತಿಗೆ ಸೇವೆಗೈದವರನ್ನು ಆರಿಸಿದಲ್ಲಿ ಹೆಚ್ಚಿನ ಉಪಯೋಗವಿದೆ ಎಂದವರು ಹೇಳಿದ್ದಾರೆ. ಕಿಶೋರ್ ಶೆಟ್ಟಿ ಅವರು ಸ್ಥಳೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಅವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ತುಳುನಾಡು, ಭಾಷೆಯ ಬಗ್ಗೆ ಅಭಿಮಾನ ಹೊಂದಿರುವ ಅಪಾರ ಅಭಿಮಾನಿಗಳನ್ನು ಹೊಂದಿರುವ ಕಿಶೋರ್ ಶೆಟ್ಟಿ ಅವರು ತಮ್ಮನ್ನು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ಆರಿಸಿದಲ್ಲಿ ನಾಡು ನುಡಿಯ ಸೇವೆಗೆ ಸದಾ ಸಿದ್ಧ ಎಂದು ಹೇಳಿದ್ದಾರೆ.