ಮಂಗಳೂರು: “ಹತ್ಯೆಯಾಗಿರುವ ಪ್ರವೀಣ್ ನೆಟ್ಟಾರ್ ನಮ್ಮ ಬಿಲ್ಲವ ಸಮಾಜಕ್ಕೆ ಸೇರಿದವರು. ಅವರ ಪತ್ನಿಗೆ ಕೆಲಸ ಕೊಡುವುದು ದೊಡ್ಡ ಕೆಲಸವಲ್ಲ, ಆದರೆ ಬಿಜೆಪಿ ಕೊಡಿಸಿರುವ ಗುತ್ತಿಗೆ ಆಧಾರದ ಕೆಲಸದ ಅವಧಿ ಮುಗಿದಿದೆ. ಇದು ನಿಜಕ್ಕೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ನಾಚಿಕೆ ಪಡಬೇಕಾದ ವಿಷಯ. ಬಿಜೆಪಿ ಸರಕಾರ ಇದ್ದಾಗ ಮುಖ್ಯಮಂತ್ರಿಯವರಿಗೆ, ಎಂಪಿ ನಳಿನ್ ಕುಮಾರ್ ಕಟೀಲ್ ಗೆ ನೆಟ್ಟಾರ್ ಪತ್ನಿಯನ್ನು ಕೇಂದ್ರ ಅಥವಾ ರಾಜ್ಯ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿಸಬಹುದಿತ್ತು ಅಥವಾ ಸರಕಾರದಿಂದ ಶಾಶ್ವತ ಉದ್ಯೋಗ ಕಲ್ಪಿಸಬಹುದಿತ್ತು. ಅದನ್ನು ಬಿಟ್ಟು ತಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹತ್ಯೆಗೀಡಾದಾಗ ಆತನ ಕುಟುಂಬದ ಸದಸ್ಯರಿಗೆ ತಾತ್ಕಾಲಿಕ ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಲಾಗಿದೆ. ಇದು ನಮ್ಮ ಬಿಲ್ಲವ ಸಮಾಜ ಖಂಡಿತಾ ಒಪ್ಪುವುದಿಲ್ಲ. ನಳಿನ್ ಕುಮಾರ್ ಕಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ. ನೆಟ್ಟಾರ್ ಪತ್ನಿಗೆ ವೈಯಕ್ತಿಕ ನೆಲೆಯಲ್ಲಿ ನಾನು ಕೆಲಸ ನೀಡುತ್ತೇನೆ” ಎಂದು ಬಿಲ್ಲವ ಮುಖಂಡೆ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು “ಹಿಂದೂ ಸಂಘಟನೆಯ ಬಿಲ್ಲವ ಯುವಕರನ್ನು ಬಿಜೆಪಿ ನಾಯಕರು ತಮಗೆ ಬೇಕಾದಂತೆ ಬಳಸಿಕೊಂಡು ಕೊನೆಗೆ ಕೈಬಿಡುತ್ತಾರೆ. ನೆಟ್ಟಾರ್ ಕುಟುಂಬ ನಮ್ಮ ಬಿಲ್ಲವ ಸಮಾಜಕ್ಕೆ ಸೇರಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೆಟ್ಟಾರ್ ಅವರ ಪತ್ನಿಗೆ ಉದ್ಯೋಗ ಕೊಡಲು ನಾವೆಲ್ಲರೂ ಒಂದಾಗಿ ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ” ಎಂದರು.
ಇದೇ ವೇಳೆ ಮಾತಾಡಿದ ಅವರು, “ಬಿಲ್ಲವ ಸಮಾಜದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್, ಹರೀಶ್ ಕುಮಾರ್ ಇಬ್ಬರು ಎಂ ಎಲ್ ಸಿಗಳಿದ್ದು ಅವರಿಗೆ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನಮಾನ ನೀಡಬೇಕು. ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮಾಜಕ್ಕೆ ಒಳ್ಳೆಯ ನಂಟು ಇದೆ. ಬಿಲ್ಲವ ಸಮಾಜದ ಹಿರಿಯರು ಕಾಂಗ್ರೆಸ್ ಪಕ್ಷಕ್ಕಾಗಿ ಸಾಕಷ್ಟು ದುಡಿದಿದ್ದಾರೆ. ಚುನಾವಣೆಯಲ್ಲಿ ನಿರ್ಣಾಯಕರಾಗಿರುವ ಬಿಲ್ಲವ ಸಮಾಜದ ನಾಯಕರಿಗೆ ಮಂತ್ರಿಮಂಡಲದಲ್ಲಿ ಸ್ಥಾನಮಾನ ಸಿಗದಿರುವ ಕುರಿತು ಬೇಸರವಿದೆ. ಹೀಗಾಗಿ ಬಿ.ಕೆ. ಹರಿಪ್ರಸಾದ್ ಅಥವಾ ಹರೀಶ್ ಕುಮಾರ್ ಅವರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಸಿಗಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯವಾಗಿದೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ, ರಾಜ್ಯ ಹಿಂದುಳಿದ ವರ್ಗ ಉಪಾಧ್ಯಕ್ಷ ಗಣೇಶ್ ಪೂಜಾರಿ, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆನಂದ ಅಮೀನ್, ದಕ್ಷಿಣ ಕನ್ನಡ ಹಿಂದುಳಿದ ವರ್ಗದ ಉಪಾಧ್ಯಕ್ಷ ಬಿ.ಕೆ. ತಾರನಾಥ್, ಸುರತ್ಕಲ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.