‘ಹಿಂದುತ್ವ ಮತ್ತು ಅಭಿವೃದ್ಧಿಗಾಗಿ ನನ್ನನ್ನು ಮತ್ತೊಮ್ಮೆ ಆಶೀರ್ವದಿಸಿ” -ಡಾ. ಭರತ್ ವೈ. ಶೆಟ್ಟಿ

ಕಾವೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಭರತ್ ವೈ ಶೆಟ್ಟಿ ಅವರು ನಿನ್ನೆ ಬೆಳಗ್ಗೆ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರ ಜೊತೆ ರೋಡ್ ಶೋ ನಡೆಸಿ ಬಳಿಕ ಕಾವೂರು ಮೈದಾನದಲ್ಲಿ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಾಮಪತ್ರ ಫೈಲ್ ಗೆ ಪೂಜೆ ಸಲ್ಲಿಸಿದರು.


ಬಹಿರಂಗ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ಮಾತನ್ನಾಡಿದ ಮಂಗಳೂರು ಉತ್ತರ ಬಿಜೆಪಿ ಮಂಡಲಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಅವರು, “ಮತ್ತೊಮ್ಮೆ ಭರತ್ ಶೆಟ್ಟಿ ಅವರನ್ನು ಮಂಗಳೂರು ಉತ್ತರ ಕ್ಷೇತ್ರಕ್ಕೆ ಪಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಅಭಿವೃದ್ಧಿ ಮತ್ತು ಹಿಂದುತ್ವ ಎರಡರಲ್ಲೂ ರಾಜ್ಯದ ಗಮನ ಸೆಳೆದಿರುವ ಭರತ್ ಶೆಟ್ಟಿ ಅವರನ್ನು ಕಳೆದ ಬಾರಿ 26000 ಮತಗಳಿಂದ ಗೆಲ್ಲಿಸಿದ್ದು ಈ ಬಾರಿ 50000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಬೇಕಿದೆ. ಯಾರು ಏನೇ ಅಪಪ್ರಚಾರ ಮಾಡಿದರೂ ಪಕ್ಷದ ಕಾರ್ಯಕರ್ತರು ಎದೆಗುಂದದೆ ಮನೆ ಮನೆಗೆ ಭೇಟಿಕೊಟ್ಟು ಅಭಿವೃದ್ಧಿಯ ಆಧಾರದಲ್ಲಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಗೆಲುವಿಗೆ ಸಹಕರಿಸಬೇಕು” ಎಂದರು.


ಬಳಿಕ ಮಾತಾಡಿದ ಡಾ. ಭರತ್ ವೈ. ಶೆಟ್ಟಿ ಅವರು, “ನನಗೆ ಕಳೆದ 5 ವರ್ಷಗಳ ಅವಧಿಯಲ್ಲಿ ನೀವೆಲ್ಲರೂ ಬೆನ್ನುತಟ್ಟಿ ಹೆಗಲಿಗೆ ಹೆಗಲು ಕೊಟ್ಟು ಹತ್ತಾರು ಜನಪರ ಕೆಲಸ ಮಾಡಲು ಶ್ರಮಿಸಿದ್ದೀರಿ. ಹಿಂದುತ್ವ ಮತ್ತು ಅಭಿವೃದ್ಧಿಯ ಜೊತೆಗೆ ಯುವಕರಿಗೆ ನಾಯಕತ್ವ ನೀಡಲು ಶ್ರಮಿಸಿದ್ದೇನೆ. ಈ ಬಾರಿಯೂ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲಿ” ಎಂದರು. ಪುಷ್ಪರಾಜ್ ಕರ್ಕೇರ ಮುಕ್ಕ ಧನ್ಯವಾದ ಸಮರ್ಪಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ಮಾಜಿ ಕಾರ್ಪೋರೇಟರ್ ಕಾಂಗ್ರೆಸ್ ಮುಖಂಡ ಅಶೋಕ್ ಶೆಟ್ಟಿ, ಶಶಿಕಲಾ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಅವರಿಗೆ ಭರತ್ ಶೆಟ್ಟಿ ಪಕ್ಷದ ಧ್ವಜ ಕೊಟ್ಟು ಬರಮಾಡಿಕೊಂಡರು. ಕಾಂಗ್ರೆಸ್ ಮುಖಂಡ ಅಶೋಕ್ ಶೆಟ್ಟಿ ಸುರತ್ಕಲ್ ಅವರು ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿಯವರ ಬೆಂಬಲಿಗರಾಗಿದ್ದು ಬಿಜೆಪಿಯ ತತ್ವ ಸಿದ್ಧಾಂತವನ್ನು ಮೆಚ್ಚಿ ಬಿಜೆಪಿ ಸೇರಿದ್ದಾಗಿ ತಿಳಿಸಿದರು.

ವೇದಿಕೆಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಾ. ಭರತ್ ವೈ. ಶೆಟ್ಟಿ, ಮಂಗಳೂರು ಮೇಯರ್ ಜಯಾನಂದ ಅಂಚನ್, ಮಂಗಳೂರು ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಗಣೇಶ್ ಹೊಸಬೆಟ್ಟು, ಕೃಷ್ಣ ಶೆಟ್ಟಿ ಕಡಬ, ಪೂಜಾ ಪ್ರಶಾಂತ್ ಪೈ, ಮಂಗಳೂರು ಉತ್ತರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಮಹೇಶ್ ಮೂರ್ತಿ ಸುರತ್ಕಲ್, ಮಾಜಿ ಜಿ.ಪಂ ಸದಸ್ಯ ಜನಾರ್ದನ ಗೌಡ, ರಾಜೀವ್ ಶೆಟ್ಟಿ ಸಲ್ಲಾಜೆ, ರಾಜೀವ್ ಕಾಂಚನ್, ಸಂದೀಪ್ ಪಚ್ಚೆನಾಡಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಜಿಲ್ಲಾ ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!