ಮೂಲ್ಕಿ ಮೂಡಬಿದ್ರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನಾಮಪತ್ರ ಸಲ್ಲಿಕೆ
ಮೂಡಬಿದ್ರೆ: ಮೂಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸೋಮವಾರ ಭಾರೀ ಜನಸ್ತೋಮದ ಮಧ್ಯೆ ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ಬಳಿಕ ನಾಮಪತ್ರ ಸಲ್ಲಿಸಿದರು.
ಸಮಾವೇಶದಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ವಿರುದ್ಧ ವಾಗ್ದಾಳಿ ನಡೆಸಿದ ಕಾರ್ಪೋರೇಟರ್ ಎಸಿ ವಿನಯರಾಜ್ ಅವರು, “ಬಿಜೆಪಿಯವರು ಮೂಲ್ಕಿ ಮೂಡಬಿದ್ರೆ ಕ್ಷೇತ್ರವನ್ನು ತಮ್ಮದು ಅಂತ ತಿಳ್ಕೊಂಡಿದ್ರೆ ಅದು ಅವರ ಭ್ರಮೆಯಾಗಿದೆ. ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಶಕ್ತಿ ಸಾಮರ್ಥ್ಯವನ್ನು ನೀವು ಲಘುವಾಗಿ ಸ್ವೀಕರಿಸಬೇಡಿ. ಅಭಯಚಂದ್ರ ಜೈನ್ ಅವರು ಈ ಬಾರಿ ಮಿಥುನ್ ರೈ ಅವರಿಗೆ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಅವರನ್ನು ಬಹುಮತ ಕೊಟ್ಟು ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ. ಬಿಜೆಪಿ ಸರಕಾರ ಅಕ್ರಮ, ಅನೈತಿಕ, ಭ್ರಷ್ಟಾಚಾರಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. 40% ಅಕ್ರಮಕ್ಕೆ ಹೆದರಿ ಶಿವಮೊಗ್ಗದಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರ ಸಂತೋಷ್ ಬಿಜೆಪಿ ಮುಖಂಡ ಈಶ್ವರಪ್ಪ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರು. ಆದರೆ ತನಿಖೆ ನಡೆಯಲೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಲಿಯುವ ಮಕ್ಕಳು ಉದ್ಯೋಗಕ್ಕಾಗಿ ಹೊರರಾಜ್ಯ, ದೇಶಗಳಿಗೆ ಹೋಗುತ್ತಿದ್ದಾರೆ. ಇಲ್ಲಿ ಹೆತ್ತವರು ಮಕ್ಕಳಿದ್ದೂ ಕೂಡ ಅನಾಥರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಇನ್ನು ಬರಬಾರದು ಅಂತ ಇದ್ರೆ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕು” ಎಂದರು.
ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, “ಮಿಥುನ್ ರೈ ಅವರು ದಿನದ 24 ಗಂಟೆಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ಟಿಕೆಟ್ ತ್ಯಾಗ ಮಾಡುವ ಮೂಲಕ ಮಾಜಿ ಶಾಸಕ ಅಭಯಚಂದ್ರ ಜೈನ್ ಅವರು ಇತರ ಜನನಾಯಕರಿಗೆ ಪ್ರೆರಣೆಯಾಗಿದ್ದಾರೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಸರಕಾರ ಯಾವ ರೀತಿ ದುರಾಡಳಿತ ನಡೆಸಿದೆ ಅನ್ನುವುದನ್ನು ನಾವೆಲ್ಲರೂ ನೋಡಿದ್ದೇವೆ. 40% ಭ್ರಷ್ಟಾಚಾರದಲ್ಲಿ ನಿರತರಾಗಿರುವ ಈ ಸರಕಾರ ಬೇಕೋ ಬೇಡವೋ ಅನ್ನುವುದನ್ನು ಜನಸಾಮಾನ್ಯರು ನಿರ್ಧರಿಸಬೇಕಿದೆ. ಮೂಲ್ಕಿ ಮೂಡಬಿದ್ರೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟಾರ್ಚ್ ಹಾಕಿ ಹುಡುಕಬೇಕು ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇಲ್ಲಿ ಸೇರಿರುವ ಸಾವಿರಾರು ಜನರು ಸರಿಯಾದ ಉತ್ತರ ನೀಡಿದ್ದಾರೆ. ಮಿಥುನ್ ರೈ ಅವರನ್ನು 25,000ಕ್ಕೂ ಅಧಿಕ ಮತಗಳಿಂದ ಗೆಲ್ಲಿಸಿ ನಿಮ್ಮ ಸೇವೆ ಸಲ್ಲಿಸಲು ಅವಕಾಶ ಕೊಡಬೇಕು” ಎಂದರು.
imp
ಮಾತು ಮುಂದುವರಿಸಿದ ಯು.ಟಿ.ಖಾದರ್ ಅವರು, “ನಾಡಿದ್ದು ನಡೆಯುವ ಚುನಾವಣೆ ಬರೀ ಮಿಥುನ್ ರೈ ಗೆಲ್ಲಿಸಲು ನಡೆಯುವ ಚುನಾವಣೆಯಲ್ಲ ಬದಲಿಗೆ ಜನವಿರೋಧಿ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಚುನಾವಣೆ. ಜನರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲದ ಈ ಸರಕಾರವನ್ನು ಕಿತ್ತುಹಾಕಲು ಇದು ಉತ್ತಮ ಅವಕಾಶ.
ಬಿಜೆಪಿ ಐಸಿಯು ವೆಂಟಿಲೆಟರ್ ನಲ್ಲಿದೆ. ಅದರ ಆಯುಷ್ಯ ಇನ್ನು 24 ದಿನಗಳು ಮಾತ್ರ. ಮೇ 13ಕ್ಕೆ ಅದರ ಉಸಿರು ಸಂಪೂರ್ಣ ನಿಲ್ಲಲಿದೆ. ಉಪ್ಪಿಗೂ ಟ್ಯಾಕ್ಸ್, ತಿನ್ನುವ ಆಹಾರಕ್ಕೂ ಟ್ಯಾಕ್ಸ್ ಹಾಕಿರುವ ದರಿದ್ರ ಸರಕಾರ ಏನಾದ್ರೂ ಇದ್ದರೆ ಅದು ಬಿಜೆಪಿ ಸರಕಾರದ ಸಾಧನೆಯಾಗಿದೆ” ಎಂದರು.
ಮಮತಾ ಗಟ್ಟಿ ಮಾತನಾಡಿ, “ಕಾಂಗ್ರೆಸ್ ಪಕ್ಷ ಮೂಲ್ಕಿ ಮೂಡಬಿದ್ರೆಯಲ್ಲಿ ಮಿಥುನ್ ರೈ ಅವರಂತಹ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡಜನರ ಕನಸು ನನಸಾಗಲಿದೆ. ಸರ್ವಧರ್ಮದ ಜನರು ಒಂದಾಗಿ ಬಾಳುವ ಜಿಲ್ಲೆಯಲ್ಲಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಬಾಳಲು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು” ಎಂದರು.
ದಿಕ್ಸೂಚಿ ಭಾಷಣ ಮಾಡಿದ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮರೋಳಿ ಅವರು, “ಅಭಯಚಂದ್ರ ಜೈನ್ ಅವರು ತಮ್ಮ ಶಿಷ್ಯನನ್ನು ಈ ಬಾರಿ ಕಣಕ್ಕಿಳಿಸುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಅವರು ತಮ್ಮ ಫೋಟೋ, ಸುದ್ದಿ ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ಸ್ಟೇ ತಂದವರಲ್ಲ. ಯಾವುದೇ ಭ್ರಷ್ಟಾಚಾರದಲ್ಲಿ ತೊಡಗಿದವರಲ್ಲ. ಆದರೆ ಅಪಪ್ರಚಾರ ಮಾಡಿ ಅವರನ್ನು ಸೋಲಿಸಲಾಯಿತು. ಇಂತಹ ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್ ತಮ್ಮ ವಿರುದ್ಧ ಸುದ್ದಿ ಪ್ರಕಟ ಮಾಡದಂತೆ ಮಾಧ್ಯಮಗಳಿಗೆ ಸ್ಟೇ ತಂದಿದ್ದಾರೆ. ಮಾಧ್ಯಮ ಮಿತ್ರರೇ ನೀವು ಅವರ ನಾಮಪತ್ರ ಸಲ್ಲಿಸುವ ಸುದ್ದಿಯನ್ನು ಕೂಡ ಪ್ರಕಟಿಸಬೇಡಿ” ಎಂದರು.
ಬಳಿಕ ಮಾತಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು, “ಮಿಥುನ್ ರೈ ಅವರನ್ನು ಮೂಲ್ಕಿ ಮೂಡಬಿದ್ರೆ ಭಾಗದ ಜನರೇ ಒಟ್ಟುಸೇರಿ ಪಕ್ಷದ ಅಭ್ಯರ್ಥಿಯನ್ನಾಗಿ ಆರಿಸಿದ್ದಾರೆ. ಅವರಿಗೆ ಎಲ್ಲರೂ ಮತ ನೀಡಿ ಹರಸಿದಲ್ಲಿ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ಮೂಡಬಿದ್ರೆ ಅಭಿವೃದ್ಧಿಯಾಗಿದ್ದು ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಹೊರತು ಉಮಾನಾಥ್ ಕೋಟ್ಯಾನ್ ಶಾಸಕರಾದ ಬಳಿಕ ಅಲ್ಲ. ಚುನಾವಣೆ ಸಮಯದಲ್ಲಿ 40% ಬಿಜೆಪಿ ಸರಕಾರ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದು ಮತದಾರರು ಇದನ್ನು ಅರಿತುಕೊಳ್ಳಬೇಕು. ಮಿಥುನ್ ರೈ ಅವರನ್ನು ಬಹುಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿ” ಎಂದರು.
ಅಭ್ಯರ್ಥಿ ಮಿಥುನ್ ರೈ ಮಾತನಾಡಿ, “ಕಳೆದ 5 ವರ್ಷಗಳಲ್ಲಿ ನಾವು ಬಿಜೆಪಿ ಸರಕಾರದ ಅಕ್ರಮ, ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇವೆ. ಇನ್ನುಳಿದದ್ದು 23 ದಿನಗಳು ಮಾತ್ರ. ಈ ಸಮಯದಲ್ಲಿ ನಾವೆಲ್ಲರೂ ಪರಸ್ಪರ ವೈಮನಸ್ಸು ಬದಿಗಿಟ್ಟು ಮನೆ ಮನೆಗೆ ಭೇಟಿ ಕೊಟ್ಟು ಪಕ್ಷದ ಪರ ಪ್ರಚಾರ ನಡೆಸಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ತರಲು ಶ್ರಮಿಸಬೇಕು” ಎಂದು ಕರೆನೀಡಿದರು.
ವೇದಿಕೆಯಲ್ಲಿ ಯು.ಟಿ. ಖಾದರ್, ಮಾಜಿ ಸಚಿವ ಅಭಯಚಂದ್ರ ಜೈನ್, ಬೆಳಪು ದೇವಿಪ್ರಸಾದ್ ಶೆಟ್ಟಿ, ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮರೋಳಿ, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ, ಪ್ರತಿಭಾ ಕುಳಾಯಿ, ಶಾಲೆಟ್ ಪಿಂಟೋ, ನ್ಯಾಯವಾದಿ ಕಾರ್ಪೋರೇಟರ್ ಎಸಿ ವಿನಯರಾಜ್, ವೆಲೇರಿಯನ್ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಮಾಜಿ ಮೇಯರ್ ಶಶಿಧರ್ ಶೆಟ್ಟಿ, ಮನೋಹರ್ ರಾಜ್, ಇಬ್ರಾಹಿಂ, ವಸಂತ್ ಬೆರ್ನಾರ್ಡ್, ಮೋಹನ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಚೆಂಡೆ, ಹುಲಿ ಕುಣಿತದ ಮೆರುಗು!
ಮಿಥುನ್ ರೈ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಹುಲಿವೇಷ, ಚೆಂಡೆ ತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿತ್ತು. ಸಹಸ್ರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಕಾಂಗ್ರೆಸ್ ಬಾವುಟವನ್ನು ಕೈಯಲ್ಲಿ ಹಿಡಿದು ಮಿಥುನ್ ರೈ ಪರ ಘೋಷಣೆಯನ್ನು ಕೂಗಿದರು. ಮೂಡಬಿದ್ರೆ ಮುಖ್ಯರಸ್ತೆಯಲ್ಲಿ ಮೆರವಣಿಗೆ ಸಾಗಿ ಪೇಟೆಯಲ್ಲಿ ತಿರುಗಿ ಆಡಳಿತ ಸೌಧ ಮುಂಭಾಗ ಬಂದು ಸೇರಿತು. ಮಿಥುನ್ ರೈ ಬಳಿಕ ಬೆಂಬಲಿಗರ ಜೊತೆ ತೆರಳಿ ನಾಮಪತ್ರ ಸಲ್ಲಿಸಿದರು.