ಕೊನೆಗೂ ಇನಾಯತ್ ಅಲಿಗೆ ಒಲಿದ ಮಂಗಳೂರು ಉತ್ತರ..! ಪುತ್ತೂರಿಗೆ ಶಕುಂತಲಾ ಶೆಟ್ಟಿ, ಮಂಗಳೂರು ದಕ್ಷಿಣಕ್ಕೆ ಲೋಬೊ ಫಿಕ್ಸ್

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದಲ್ಲದೆ ಹೈಕಮಾಂಡ್ ಗೆ ಕಗ್ಗಂಟಾಗಿದ್ದ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರಕ್ಕೆ ಕೊನೆಗೂ ಕಾಂಗ್ರೆಸ್ ಸಿಇಸಿ ಸಭೆಯಲ್ಲಿ ಹೆಸರು ಅಂತಿಮಗೊಂಡಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ.
ಮಂಗಳೂರು ಉತ್ತರದಲ್ಲಿ ಮಾಜಿ ಶಾಸಕ ಮೊಹಿದೀನ್ ಬಾವ ಹಾಗೂ ಇನಾಯತ್ ಅಲಿ ಅವರ ನಡುವೆ ಟಿಕೆಟ್ ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಹೊಸ ಯುವ ಮುಖ ಹಾಗೂ ಕೆಲವರ್ಷಗಳಿಂದ ಸತತವಾಗಿ ಕ್ಷೇತ್ರದಲ್ಲಿ ನಡೆಸಿರುವ ಪಕ್ಷ ಸಂಘಟನೆಯನ್ನು ಆಧರಿಸಿ ಇನಾಯತ್ ಅಲಿ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅದೇ ರೀತಿ ಮಂಗಳೂರು ದಕ್ಷಿಣದಲ್ಲಿ ಬಿಲ್ಲವ ನಾಯಕ ವಕೀಲ ಪದ್ಮರಾಜ್ ಅವರ ಹೆಸರು ಮುಂಚೂಣಿಗೆ ಬಂದಿತ್ತಾದರೂ ಕ್ರೈಸ್ತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂಬ ಕೂಗು ಕೇಳಿಬಂದ ಕಾರಣ ಕ್ಷೇತ್ರದ ಮಾಜಿ ಶಾಸಕ ಜೆ.ಆರ್. ಲೋಬೊ ಅವರಿಗೆ ಹೈಕಮಾಂಡ್ ಅವಕಾಶ ನೀಡಿದೆ ಎನ್ನಲಾಗಿದೆ. ಭಾರೀ ಕದನ ಕುತೂಹಲಕ್ಕೆ ಕಾರಣವಾಗಿದ್ದ ಪುತ್ತೂರಿನಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರಿಗೆ ಪಕ್ಷ ಮಣೆ ಹಾಕಿದೆ ಎಂದು ತಿಳಿದುಬಂದಿದೆ. ಮಂಗಳೂರು ಉತ್ತರ, ದಕ್ಷಿಣ, ಪುತ್ತೂರು ಸಹಿತ ಟಿಕೆಟ್ ಗಾಗಿ ಜಿದ್ದಾಜಿದ್ದಿ ಏರ್ಪಟ್ಟಿರುವ ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಹೈಕಮಾಂಡ್ ಗೆ ತಲೆಬಿಸಿ ಉಂಟುಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ವರಿಷ್ಠರು ಘೋಷಣೆ ಮಾಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ ಎಂದು ದೆಹಲಿ ಮೂಲಗಳು ಹೇಳಿವೆ.

error: Content is protected !!