“ಎಸ್ ಸಿಡಿಸಿಸಿ ಬ್ಯಾಂಕ್ ಗೆ ಆರ್ಥಿಕ ವರ್ಷದಲ್ಲಿ ರೂ. 61.38 ಕೋಟಿ ರೂ.ಲಾಭ” -ಡಾ. ಎಂ.ಎನ್. ರಾಜೇಂದ್ರ ಕುಮಾರ್

ಮಂಗಳೂರು: “ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಭಿವೃದ್ಧಿಯ ಮುಂಚೂಣಿಯಲ್ಲಿದ್ದು, ಬ್ಯಾಂಕಿಂಗ್ ಸೇವೆಯಲ್ಲಿ ದೇಶಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಹಕಾರಿ ರಂಗದಲ್ಲಿ ವಿಶಿಷ್ಟ ಹಾಗೂ ವಿನೂತನ ಬ್ಯಾಂಕಿಂಗ್ ಸೇವೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ತನ್ನ 111 ಶಾಖೆಗಳ ಮೂಲಕ ನೀಡುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ ಜನಸಾಮಾನ್ಯರ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ವಿಚಾರ. 109 ವರ್ಷಗಳ ಸಾರ್ಥಕ ಸೇವೆಯನ್ನು ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ದಕ್ಷಿಣ
ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವರದಿ ವರ್ಷದಲ್ಲಿ ಅಮೋಘ ಸಾಧನೆಗೈದು ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ರೂ 61.38 ಕೋಟಿ ರೂ.ಲಾಭ ಗಳಿಸಿದ್ದು ಕಳೆದ ವರ್ಷದ ಲಾಭಕ್ಕಿಂತ ಶೇಕಡಾ 21.57 ಏರಿಕೆಯಾಗಿದೆ. ಇದು ಎಸ್‌ಸಿಡಿಸಿಸಿ
ಬ್ಯಾಂಕ್‌ನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ” ಎಂದು ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಆಧುನಿಕ ಬ್ಯಾಂಕಿಂಗ್ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್‌ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿದೆ. ವರದಿ ವರ್ಷದಲ್ಲಿ ರೂ 13,512 ಕೋಟಿ ರೂಪಾಯಿಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ 16.40 ಏರಿಕೆಯನ್ನು ಕಂಡಿದೆ. 2023-24ನೇ ಸಾಲಿಗೆ ರೂ 15,000 ಕೋಟಿ ವ್ಯವಹಾರದ ಗುರಿಯನ್ನು ಬ್ಯಾಂಕ್ ಹೊಂದಿದೆ” ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಬ್ಯಾಂಕ್ ತನ್ನ 111 ಶಾಖೆಗಳ ಮುಖಾಂತರ ಒಟ್ಟು ರೂ 6,368.50 ಕೋಟಿ ರೂಪಾಯಿ ಠೇವಣಿ ಸಂಗ್ರಹಿಸಿ ಸಾಧನೆಗೈದಿದೆ. ಈ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ಠೇವಣಿ ಸಂಗ್ರಹಣೆಯಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಗಳಲ್ಲಿ ಮುಂಚೂಣಿಯಲ್ಲಿದೆ. ಕಳೆದ ಸಾಲಿನ ಠೇವಣಿ ಸಂಗ್ರಹಣೆಗಿಂತ ಈ ಬಾರಿ ಶೇ 12.69 ಏರಿಕೆಯಾಗಿದೆ. ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ರೂ 1,681.46 ಕೋಟಿ ರೂಪಾಯಿ, ಮಧ್ಯಮಾವಧಿ ಸಾಲ ರೂ 150.20 ಕೋಟಿ ರೂಪಾಯಿ, ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು ರೂ 1,83166 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಕೃಷಿಯೇತರ ಸಾಲವಾಗಿ ರೂ 3,863.89 ಕೋಟಿ ಸಾಲ ನೀಡಿದ್ದು, ಪ್ರಸಕ್ತ ಸಾಲಿನಲ್ಲಿ ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ರೂ 7,143.38 ಕೋಟಿಯಾಗಿರುತ್ತದೆ. ಕಳೆದ ವರ್ಷದ ಹೊರಬಾಕಿ ಸಾಲ ರೂ. 5,956.87 ಕೋಟಿಯಾಗಿದ್ದು ಕಳೆದ ಸಾಲಿಗಿಂತ ಶೇ 19.92 ಏರಿಕೆಯಾಗಿರುತ್ತದೆ”
“ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ಬ್ಯಾಂಕ್‌
ರುಪೇ ಕಿಸಾನ್ ಕಾರ್ಡ್‌ ನೀಡಿದೆ. ಈಗಾಗಲೇ 1,32,291 ರುಪೇ ಕಿಸಾನ್ ಕಾರ್ಡ್ ರೈತರಿಗೆ ವಿತರಿಸಲಾಗಿದೆ. 72,298 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ.
ಬ್ಯಾಂಕ್ ಮುಂದಿನ ಅವಧಿಯಲ್ಲಿ 15 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಂಡಿದೆ. ಈಗಾಗಲೇ 3 ತಾಲೂಕಿನ ಬ್ಯಾಂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಅಳವಡಿಸಲಾಗಿದ್ದು ಮುಂದೆ ಉಳಿದ 13 ತಾಲೂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಬ್ಯಾಂಕಿಗೆ 20 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 18 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ.
ಎರಡು ಬಾರಿ ಫ್ರಾಂಟಿಯರ್ ಇನ್ ಕೋ ಅಪರೇಟಿವ್ ಬ್ಯಾಂಕಿಂಗ್ ಎವಾರ್ಡ್ ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್‌ ಪುರಸ್ಕೃತಗೊಂಡಿದೆ. ಬ್ಯಾಂಕಿನ ಸರ್ವಾಂಗೀಣ ಸಾಧನೆಗಾಗಿ ಎರಡು ಬಾರಿ ಪ್ರತಿಷ್ಠಿತ ಬ್ಯಾಂಕ್ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ” ಎಂದು ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ವಿನಯ್ ಕುಮಾರ್ ಸೂರಿಂಜೆ, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!