ಸುರತ್ಕಲ್: ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಾಜಿ ಶಾಸಕ ಬಾವಾರಿಂದ ತಡೆ!

ಸುರತ್ಕಲ್: ಇಲ್ಲಿನ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇದಕ್ಕಾಗಿ ಕಾರ್ ಪಾರ್ಕಿಂಗ್ ಸ್ಥಳದ ಸಮೀಪದ ಮರ ಕಡಿಯುತ್ತಿದ್ದ ವೇಳೆ ಮಾಜಿ ಶಾಸಕ ಮೊಯಿದೀನ್ ಬಾವಾ ತಡೆಯೊಡ್ಡಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ.


ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಎರಡು ಮರಗಳಿದ್ದು ಅಭಿವೃದ್ಧಿ ದೃಷ್ಟಿಯಿಂದ ಇದರ ತೆರವು ಮಾಡುವುದು ಅನಿವಾರ್ಯವಾಗಿತ್ತು. ಪಾಲಿಕೆ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾಗ ತಡರಾತ್ರಿ ಸ್ಥಳಕ್ಕೆ ಬಂದ ಬಾವಾ ಅಡ್ಡಿಪಡಿಸಿ ಮರ ಕಡಿಯದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕ ಮೊಯಿದೀನ್ ಬಾವಾ ಅವಧಿಯಲ್ಲಿ ಸುರತ್ಕಲ್ ಕೃಷ್ಣಾಪುರ ರಸ್ತೆ ಅಭಿವೃದ್ಧಿ ಸಂದರ್ಭ ಕಾಂತೇರಿ ಧೂಮಾವತಿ ದೈವಸ್ಥಾನ ಬಳಿ ಬೆಳೆದಿದ್ದ ಭಾರೀ ಗಾತ್ರದ 10ಕ್ಕೂ ಅಧಿಕ ಮರಗಳನ್ನು ಕಡಿಯಲು ಅನುಮತಿ ನೀಡಿದ್ದರು. ಆ ಬಳಿಕ ರಸ್ತೆ ಮೇಲ್ದರ್ಜೆಗೇರಿದ್ದು ಅಲ್ಲಿ ಬಿಸಿಲಿನಲ್ಲಿ ನಡೆದಾಡುವುದು ಅಸಾಧ್ಯವಾಗಿದೆ. ಇಂದಿಗೂ ಪರ್ಯಾಯವಾಗಿ ಒಂದೂ ಸಸಿ ನೆಟ್ಟು ಬೆಳೆಸಿಲ್ಲ. ಹೀಗಿರುವಾಗ ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಮರ ಕಡಿಯುವುದಕ್ಕೆ ಬಾವಾ ಅಡ್ಡಿಪಡಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಮಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

error: Content is protected !!