ಕಾವೂರಿನಲ್ಲಿ ಬಿಜೆಪಿ “ವಿಜಯ ಸಂಕಲ್ಪ ಯಾತ್ರೆ”
ಸುರತ್ಕಲ್: ಬಿಜೆಪಿ ಕರ್ನಾಟಕ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಕಾವೂರಿನ ಶಾಂತಿನಗರ ಕೇಂದ್ರ ಮೈದಾನದಲ್ಲಿ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು, “ನಾವು ಅಭಿವೃದ್ಧಿ ಮತ್ತು ಹಿಂದುತ್ವದ ಹೆಸರಿನಲ್ಲಿ ಮತ ಕೇಳುತ್ತೇವೆ. ಇದಕ್ಕಾಗಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ, ಅಭಿವೃದ್ಧಿ ಮತ್ತು ಹಿಂದುತ್ವದ ಜೊತೆ ಮಂಗಳೂರು ಉತ್ತರ ಕ್ಷೇತ್ರ ಪ್ರಗತಿ ಪಥದಲ್ಲಿ ಸಾಗುತ್ತಿದೆ. ಆದರೆ ಈಗ ಕೆಲವು ಸಮಯಗಳಿಂದ ಕ್ಷೇತ್ರದಲ್ಲಿ ಬಾವ ಮತ್ತು ಅಲಿ ಅಂತಂದ್ರೆ ಬಾವಲಿ ತಿರುಗಾಡುತ್ತಿದೆ, ಒಬ್ಬನಲ್ಲಿ ದುಡ್ಡಿದೆಯಂತೆ, ಇನ್ನೊಬ್ಬನಲ್ಲಿ ಚೆಕ್ ಬೌನ್ಸ್ ಮಾಡುವ ಕೆಪ್ಯಾಸಿಟಿ ಇದೆಯಂತೆ. ಇವರಲ್ಲಿ ಅಷ್ಟು ದುಡ್ಡಿದ್ರೆ ಕೋವಿಡ್ ಸಮಯದಲ್ಲಿ ಎಲ್ಲಿ ಸತ್ತೋಗಿದ್ರು? ದೇವಸ್ಥಾನಕ್ಕೆ ಹೋಗ್ತಾರೆ, ಕೋಲ, ನೇಮೋತ್ಸವ, ಯಕ್ಷಗಾನ ಎಲ್ಲಾ ಕಡೆ ಹೋಗ್ತಾರೆ, ನೀವು ಅವರಲ್ಲಿ ಕೇಳಿ ಅಲ್ಲಿ ತಗೊಂಡ ಗಂಧ ಪ್ರಸಾದ ಏನು ಮಾಡ್ತಾರೆ? ಅಲ್ಲೇ ಕಾಲಡಿಗೆ ಹಾಕ್ತಾರೆ ಇಲ್ಲಾ ಕಾರಲ್ಲಿ ಇಡ್ತಾರೆ? ಬಾವಲಿ ಅದರಷ್ಟಕ್ಕೆ ತಿರುಗಾಡಿಕೊಂಡಿರಲಿ. ನಾವು ನಮ್ಮ ಅಭಿವೃದ್ಧಿ ಕಾರ್ಯಗಳತ್ತ ಗಮನ ಕೊಡೋಣ” ಎಂದರು.
“9 ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ 9 ಐಐಟಿಗಳನ್ನು ಸ್ಥಾಪಿಸಿದ ಕೀರ್ತಿ ನಮ್ಮ ಬಿಜೆಪಿ ಸರಕಾರದ್ದು. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೇ 9 ವಿಮಾನ ನಿಲ್ದಾಣಗಳನ್ನು ರಾಜ್ಯದಲ್ಲಿ ಪ್ರಾರಂಭಿಸಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಶ್ಲಾಘನೀಯ ಕೆಲಸ ಮಾಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವುದಿಲ್ಲ ಸುಮ್ಮನೆ ಪ್ರಚಾರ ಪಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡು ಬರುತ್ತಿದ್ದರು. ಆದರೆ ಮೋದಿ ಸರಕಾರ ಅಯೋಧ್ಯೆಯನ್ನು ಅಲ್ಲೇ ನಿರ್ಮಾಣ ಮಾಡುತ್ತಿದೆ. ಇದು ಗುಂಡಿಗೆಯ ಸರಕಾರ, ಪಿಎಫ್ ಐ ಕಾರ್ಯಕರ್ತರನ್ನು ಓಡಿಸಿ ಓಡಿಸಿ ಹಿಡಿದು ಜೈಲಿಗೆ ಹಾಕಿದ್ದೇವೆ” ಎಂದರು.
ಬಳಿಕ ಮಾತಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು, “ಭಾರತವನ್ನು ತುಂಡು ಮಾಡಿದವರೇ ಈಗ ರಾಜಕೀಯಕ್ಕಾಗಿ ಭಾರತ್ ಜೋಡೋ ಎನ್ನುತ್ತಿದ್ದಾರೆ. ರಾಹುಲ್ ಗಾಂಧಿಯವರಲ್ಲಿ ನೀವು ಈ ಬಗ್ಗೆ ಕೇಳಿ. ದೇಶವನ್ನು ಒಡೆದು ಆಳ್ವಿಕೆ ಮಾಡಿರುವ ಕಾಂಗ್ರೆಸಿಗರು ಇಂದು ನೀತಿಪಾಠ ಮಾಡುತ್ತಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ವಿವರಿಸಿ ಮತ ಕೇಳೋಣ, ಮತ್ತೊಮ್ಮೆ ಬಿಜೆಪಿ ಸರಕಾರವನ್ನು ಆಡಳಿತಕ್ಕೆ ತರೋಣ” ಎಂದರು.
ವೇದಿಕೆಯಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಹಿಂದುಳಿದ ವರ್ಗಗಳ ಖಾತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ , ಮಂಗಳೂರು ಮೇಯರ್ ಜಯಾನಂದ ಅಂಚನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಜಗದೀಶ್ ಶೇಣವ, ಉತ್ತರ ಮಂಡಲಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಜಿಲ್ಲಾ ಉಪಾಧ್ಯಕ್ಷೆ ಪ್ರಭಾ ಮಾಲಿನಿ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಕೃಷ್ಣ ಶೆಟ್ಟಿ ಕಡಬ, ದೇವದಾಸ್ ಶೆಟ್ಟಿ, ರಾಜೇಶ್ ಶೆಟ್ಟಿ, ರಾಮದಾಸ್ ಬಂಟ್ವಾಳ, ದತ್ತಾತ್ರೇಯ ಶಿವಮೊಗ್ಗ, ಮಂಗಳೂರು ಉತ್ತರ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪೂಜಾ ಪೈ, ಕಾರ್ಪೋರೇಟರ್ ಗಳಾದ ಶ್ವೇತಾ ಪೂಜಾರಿ, ವರುಣ್ ಚೌಟ, ಸಂಗೀತ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ತಿಲಕ್ ರಾಜ್ ಕೃಷ್ಣಾಪುರ ಅತಿಥಿಗಳನ್ನು ಸ್ವಾಗತಿಸಿದರು.