“ಭರತ್ ಶೆಟ್ಟಿ ತಂದಿರುವ 1,900 ಕೋಟಿಗೂ ಹೆಚ್ಚು ಅನುದಾನ ಎಲ್ಲಿ ಬಳಕೆಯಾಗಿದೆ?” -ಮೊಯಿದೀನ್ ಬಾವಾ

ಮಂಗಳೂರು: “ಸುರತ್ಕಲ್ ಜಂಕ್ಷನ್ ನಿಂದ ಗಣೇಶಪುರ ದೇವಸ್ಥಾನದ 6 ಪಥದ ರಸ್ತೆಗೆ 58 ಕೋಟಿ. ರೂ. ಅನುದಾನವನ್ನು 2017-18ರ ಬಜೆಟ್ ನಲ್ಲಿ ಹಣ ಮಂಜೂರಾತಿಯಾಗಿ ಟೆಂಡರ್‌ ಆಗಿದ್ದು ನನ್ನ ಅವಧಿಯಲ್ಲಿ ಶಿಲಾನ್ಯಾಸ ಕೂಡಾ ನಡೆದಿತ್ತು. ಆದರೆ ಅಷ್ಟರಲ್ಲಿ ಚುನಾವಣೆ ಘೋಷಣೆಯಾದ ಕಾರಣ ಕೆಲಸ ಪ್ರಾರಂಭವಾಗಿರಲಿಲ್ಲ. ನಂತರ ಬಂದ ಶಾಸಕ ಡಾ.ವೈ.ಭರತ್ ಶೆಟ್ಟಿ ಅವರು ಆ ಟೆಂಡರ್‌ ಅನ್ನು ರದ್ದುಗೊಳಿಸಿ ಅವರ ಅವಧಿಯಲ್ಲಿ ಮರು ಟೆಂಡರ್‌ ಕರೆದರೂ ಕಾಮಗಾರಿ ಆರಂಭವಾಗಿರಲಿಲ್ಲ. ಈಗ ಚುನಾವಣೆ ಬರುವಂತಹ ಸಂದರ್ಭದಲ್ಲಿ 58 ಕೋಟಿ ರೂ.ಅನುದಾನವನ್ನು 18 ಕೋಟಿ ರೂ.ಗೆ ಸೀಮಿತಗೊಳಿಸಿ
ಆ ಭಾಗದ ನಾಗರಿಕರಿಗೆ ಅನ್ಯಾಯವೆಸಗಿದ್ದಾರೆ” ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಆರೋಪಿಸಿದ್ದಾರೆ.
“ರಸ್ತೆಯ ಅನುದಾನವನ್ನು ಬೇರೆ ಬೇರೆ ವಾರ್ಡ್ ಗಳ ಸಣ್ಣ ಸಣ್ಣ ಕೆಲಸಕ್ಕೆ ಉಪಯೋಗಿಸಿ 1,900 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ ಎಂದು ಹೇಳುತ್ತಿದ್ದಾರೆ. ಅಷ್ಟು ಅನುದಾನ ತಂದಿದ್ದು ಸುರತ್ಕಲ್ ನಲ್ಲಿ ಯಾವ ಯೋಜನೆ ಅನುಷ್ಠಾನಗೊಳಿಸಲಾಯಿತು? ಅಲ್ಲಲ್ಲಿ ಅವರ ಭಾವಚಿತ್ರವಿರುವ ಪ್ಲೆಕ್ಸ್ ಗಳನ್ನು ಹಾಕಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಕುಳಾಯಿ ಭಾಗದ ಮೊಗವೀರ ಬಾಂಧವರಿಗೆ ಆಸ್ಕರ್ ರವರ ಮುತುವರ್ಜಿಯಿಂದ ಕೇಂದ್ರ ಯುಪಿಎ ಸರ್ಕಾರದಲ್ಲಿ ನವಬಂದರು ಸಹಯೋಗದೊಂದಿಗೆ ಕುಳಾಯಿ ಮೀನುಗಾರಿಗೆ ಜಟ್ಟಿ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಆ ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರ್ಕಾರದ ಮಂತ್ರಿಗಳಾದ ನಿತಿನ್ ಗಡ್ಕರಿಯವರು ಬಂದು ಇದನ್ನು
ಶಿಲಾನ್ಯಾಸ ಮಾಡಿದರು. ಇಷ್ಟೆಲ್ಲ ಆದರೂ ಈವರೆಗೆ ಕೆಲಸ ಆರಂಭಿಸದೇ ಮೀನುಗಾರ ಸಮುದಾಯಕ್ಕೆ ಡಾ ಭರತ್ ಶೆಟ್ಟಿ ಅನ್ಯಾಯ ಮಾಡಿದ್ದಾರೆ” ಎಂದು ಬಾವಾ ದೂರಿದ್ದಾರೆ.
“ಸುರತ್ಕಲ್ ಮಾರುಕಟ್ಟೆ ನಿರ್ಮಾಣಕ್ಕೆ ನಾಗರಿಕರ ಮನವೊಲಿಸಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮನವೊಲಿಸಿ ಹೊಸ ವಿನ್ಯಾಸದ ಮಾರುಕಟ್ಟೆ ನಿರ್ಮಾಣಕ್ಕೆ ಅಂದಾಜು 162 ಕೋ. ರೂ. ಅನುದಾನವನ್ನು ತಂದು ಆರಂಭಿಕವಾಗಿ 61 ಕೋಟಿ ರೂ.
ಬಿಡುಗಡೆಯಾಗಿ 14 ಕೋಟಿ.ರೂ. ಮೊತ್ತದ ಕಾಮಗಾರಿ ನಡೆದಿತ್ತು. ಆ ಬಳಿಕ ಶಾಸಕರಾದ ಡಾ.ಭರತ್ ಶೆಟ್ಟಿಯವರು ಮತ್ತೆ ಅದೇ ಕಾಮಗಾರಿಗೆ 21 ಕೋಟಿ ರೂ. ಹೆಚ್ಚಿನ ಮೊತ್ತಕ್ಕೆ ಟೆಂಡರಿಗೆ ತಯಾರಿ ಮಾಡಿರುತ್ತಾರೆ. 35 ಕೋಟಿ ರೂ. ನಷ್ಟಕ್ಕೆ ಜನರ ತೆರಿಗೆ ಹಣವನ್ನು ಪೋಲು
ಮಾಡುತ್ತಿರುವುದು ಈಗಿನ ಶಾಸಕರ ವಿಫಲತೆಗೆ ಕಾರಣವಾಗಿದೆ. ಇದಕ್ಕೆ ಸರಿಯಾದ ಉತ್ತರವನ್ನು ಶಾಸಕರು ಸುರತ್ಕಲ್ ಭಾಗದ ಜನರಿಗೆ ನೀಡಬೇಕಾಗಿದೆ” ಎಂದು ಬಾವಾ ಒತ್ತಾಯಿಸಿದರು.
“ಪಚ್ಚನಾಡಿ ಕಸವಿಲೇವಾರಿ ಕೇಂದ್ರ ಈಗಾಗಲೇ ಅಂದಾಜು 70 ಎಕ್ರೆ ಪ್ರದೇಶದಲ್ಲಿದೆ. ಹಳೆಯ ಕಸದ ರಾಶಿ ತೆಗೆದು ಹಾಕಲು ಗುತ್ತಿಗೆ ನೀಡಲಾಗಿದ್ದು ಹಂತ ಹಂತವಾಗಿ ಇಲ್ಲಿ ಸುಮಾರು 42 ಎಕ್ರೆ ಸ್ಥಳ ಖಾಲಿಯಾಗಿದೆ. ದಿನನಿತ್ಯದ ಕಸ ವಿಲೇವಾರಿಗೆ ಬೇರೆ ಸ್ಥಳವೂ ಇದೆ. ಹೀಗಿರುವಾಗ ಪುನಃ 10 ಎಕ್ರೆ ಜಾಗವನ್ನು ಟಿ.ಡಿ.ಆರ್‌. ಮೂಲಕ ಖರೀದಿ ಅನಗತ್ಯವಾಗಿದೆ. ಈಗಾಗಲೇ ವಿವಿಧ ಸಮಸ್ಯೆಗಳಿಗೆ
ಒಳಗಾದ ಮಂದಾರ ನಿವಾಸಿಗಳಿಗೆ ತೊಂದರೆ ಕೊಟ್ಟು ಈಗಾಗಲೇ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಹುನ್ನಾರವಾಗಿದೆ” ಎಂದು ಬಾವಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ನೀರಜ್ ಪಾಲ್, ಗಣೇಶ್, ಜೈಸನ್, ಅಕ್ಬರ್ ಅಲಿ, ನಜೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!