“ಬೀಡಿಗೆ ಹೆಚ್ಚುವರಿ ಕಮಿಷನ್ ನೀಡದೆ ಇದ್ದಲ್ಲಿ ಉಗ್ರ ಪ್ರತಿಭಟನೆ” -ಬೀಡಿ ಗುತ್ತಿಗೆದಾರರ ಯೂನಿಯನ್ ಎಚ್ಚರಿಕೆ

ಮಂಗಳೂರು: “ದಕ್ಷಿಣಕನ್ನಡ-ಉಡುಪಿ-ಮಂಜೇಶ್ವರ-ಕಾಸರಗೋಡು-ಕಾಂಞಗಾಡ್ ಜಿಲ್ಲೆಗಳಲ್ಲಿ ಬೀಡಿ ಗುತ್ತಿಗೆದಾರರಾಗಿ ಸುಮಾರು 5 ಸಾವಿರದಷ್ಟು ಸದಸ್ಯರಿರುತ್ತಾರೆ. ಜಿಲ್ಲೆಯಲ್ಲಿ ವಿವಿಧ ಮಾರ್ಕಿನ ಬೀಡಿ ಸಂಸ್ಥೆಯಿಂದ ಗುತ್ತಿಗೆದಾರರು ಎಲೆ ತಂಬಾಕು ಇತರ ವಸ್ತುಗಳನ್ನು ಪಡೆದು ಅದನ್ನು ಬೀಡಿ ಕಾರ್ಮಿಕರಿಗೆ ವಿತರಿಸಿ ಅದರಿಂದ ತಯಾರಾದ ಬೀಡಿಯನ್ನು ಕಾರ್ಮಿಕರಿಂದ ಪಡೆದು ಆಯಾಯ ಕಂಪೆನಿಗಳಿಗೆ ತಲುಪಿಸುವ ಕೆಲಸ ಗುತ್ತಿಗೆದಾರರದ್ದಾಗಿದೆ. ಅವರ ದುಡಿಮೆಗೆ ಕೇವಲ 1
ಸಾವಿರ ಬೀಡಿಯ ಮೇಲೆ ಕಮಿಷನ್ ಮಾತ್ರ ನೀಡಲಾಗಿದ್ದು, ಬೇರೆ ಯಾವುದೇ ಸೌಲಭ್ಯವಿರುವುದಿಲ್ಲ.
ಬೀಡಿ ಗುತ್ತಿಗೆದಾರರ ವಿವಿಧ ಸಂಘಟನೆಗಳು ಪ್ರತಿ ವರ್ಷ ಹೆಚ್ಚುವರಿ ಕಮಿಷನ್‌ಗಾಗಿ ಆಡಳಿತ ವರ್ಗಕ್ಕೆ ಮನವಿಯ ಮೂಲಕ ಒತ್ತಾಯಿಸುತ್ತಿದ್ದರೂ ಆಡಳಿತ ವರ್ಗ ಎಪ್ರಿಲ್‌ನಲ್ಲಿ ಹೆಚ್ಚುವರಿ ಕಮಿಷನ್ ನೀಡದೇ ಸತಾಯಿಸಿ ಡಿಸೆಂಬರ್ ಜನವರಿಯಲ್ಲಿ ನೀಡುತ್ತಾ ಬಂದಿದೆ. ಈ ಬಾರಿ 2022/23 ರ ಅವಧಿಗೆ ರೂಪಾಯಿ 10ನ್ನು ಹೆಚ್ಚುವರಿಯಾಗಿ ನೀಡಲು
ಒತ್ತಾಯಿಸಲಾಯಿತು. ಅದರಂತೆ ದಿನಾಂಕ ಕಳೆದ ಜ.5ರಂದು ವಿವಿಧ ಬೀಡಿ ಗುತ್ತಿಗೆದಾರರು ಜಂಟಿಯಾಗಿ 16 ತಾರೀಕಿನ ಒಳಗೆ ಹೆಚ್ಚುವರಿ ಕಮಿಷನ್ ನೀಡಲು ಮನವಿ ಸಲ್ಲಿಸಿದ್ದರೂ ಆಡಳಿತ ವರ್ಗ ಯಾವುದೇ ಕ್ರಮ ಜರುಗಿಸದೆ ದಬ್ಬಾಳಿಕೆ ನಡೆಸುತ್ತಿದೆ” ಎಂದು ಬೀಡಿ ಗುತ್ತಿಗೆದಾರರ ಒಕ್ಕೂಟದ ಕಾರ್ಯಾಧ್ಯಕ್ಷ ಮಹಮ್ಮದ್ ರಫಿ ಆರೋಪಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, “ಜ.17ರಂದು ಮಾಲಕರ ಒಕ್ಕೂಟದ ಅಧ್ಯಕ್ಷರ ಅನುಮತಿಯಂತೆ ಜ.30ರಂದು ಜಂಟಿ ಸಭೆ ಕರೆದು ಹೋರಾಟ ನಡೆಸುವ ಕುರಿತು ಚರ್ಚಿಸಲಾಗಿದ್ದು ಒಕ್ಕೂಟದ ಕಾರ್ಯದರ್ಶಿ ಬಿ. ಸತೀಶ್ ಪೈಯವರು ವಿವಿಧ ಬೀಡಿ ಗುತ್ತಿಗೆದಾರರ ಸಂಘಟನೆಗಳ ಅಧ್ಯಕ್ಷರುಗಳಿಗೆ ಮೆಸೇಜ್
ರವಾನಿಸಿದ್ದು ಅದರಂತೆ ಜಂಟಿ ಸಭೆ ವಿನಾಃ ಕಾರಣ ರದ್ದುಗೊಂಡಿತ್ತು. ಆದ್ದರಿಂದ ಫೆ.10ರೊಳಗೆ ಮಾತುಕತೆಗೆ ಆಹ್ವಾನ ನೀಡದಿದ್ದಲ್ಲಿ ಅಂದಿನಿಂದ 3 ಜಿಲ್ಲೆಗಳ ಬೀಡಿ ಗುತ್ತಿಗೆದಾರರು ಕೆಲಸ ಸ್ಥಗಿತಗೊಳಿಸಿ, ಬೇಡಿಕೆ ಈಡೇರುವ ತನಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದು. ಸುಮಾರು
60 ಡಿಪೋಗಳ ಎದುರು ಧರಣಿ ಸತ್ಯಾಗ್ರಹ, ಬೀಡಿ, ಎಲೆ, ತಂಬಾಕು, ಲೇಬಲ್ ಬೀಡಿ, ಸಾಗಾಟಕ್ಕೆ ತಡೆಹಿಡಿದು ಮಂಗಳೂರು ಗಣೇಶ್ ಬೀಡಿ ಕಚೇರಿ ಮತ್ತು ಭಾರತ್ ಬೀಡಿ ಸಮೂಹ ಸಂಸ್ಥೆಯ ಎದುರು ಬೀಡಿ ಗುತ್ತಿಗೆದಾರರು ಮತ್ತು ಬೀಡಿ ಕಾರ್ಮಿಕರನ್ನು ಒಗ್ಗೂಡಿಸಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷರಾದ ರವಿ ಉಡುಪಿ, ಹರೀಶ್ ಕೆ. ಎಸ್., ಕೃಷ್ಣಪ್ಪ ತೊಕ್ಕೊಟ್ಟು, ಗಂಗಾಧರ್ ಶೆಟ್ಟಿ, ಕೃಷ್ಣ ಕಾಸರಗೋಡು ಹಾಗೂ ಕರ್ನಾಟಕ ರಾಜ್ಯ ಬೀಡಿ ಕಂಟ್ರಾಕ್ಟ್ರುದಾರರ ಸಂಘ (ರಿ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟ್ರುದಾರರ ಸಂಘ (ರಿ), ಸೌತ್ ಕೆನರಾ-ಉಡುಪಿ ಜಿಲ್ಲಾ ಬೀಡಿ ಕಂಟ್ರಾಕ್ಟರ್ ಯೂನಿಯನ್(ರಿ), ಜಯಕರ್ನಾಟಕ ಬೀಡಿ ಗುತ್ತಿಗೆದಾರರ ಸಂಘ ಪುತ್ತೂರು, ಕಾಸರಗೋಡು ಜಿಲ್ಲಾ ಬೀಡಿ ಗುತ್ತಿಗೆದಾರರ ಸಂಘ, ಕಾಸರಗೋಡು ಜಿಲ್ಲೆ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!