ಸುರತ್ಕಲ್: ಕೋಡಿಕೆರೆಯಲ್ಲಿ ಶಿವಾಜಿ ಫ್ರೆಂಡ್ಸ್ ಸರ್ಕಲ್ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿದ ಶಿವಾಜಿಯ ಪ್ರತಿಮೆ ಹಾಗೂ ಸರ್ಕಲ್ ಅನಾವರಣ ಕಾರ್ಯಕ್ರಮ ಶನಿವಾರ ಸಂಜೆ ನೆರವೇರಿತು.
ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು, “ಶಿವಾಜಿ ಮಹಾರಾಜರ ಪ್ರತಿಮೆ ಈ ಭಾಗದಲ್ಲಿ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಚಾರ. ನಮ್ಮ ದೇಶದ ಮಣ್ಣಿನಲ್ಲಿ ಇಂದು ಪರಿವರ್ತನೆಯ ಯುಗ ಆರಂಭವಾಗಿದೆ. ಪರಿವರ್ತನೆ ಯಾವುದೇ ಒಂದು ವರ್ಗದ ವಿರುದ್ಧವಲ್ಲ. ಶಿವಾಜಿಯ ಸ್ವರೂಪವನ್ನು ಯುವಕರು ತಮ್ಮ ಹೃದಯದಲ್ಲಿ ಇರಿಸಿಕೊಂಡರೆ ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಬೇರೆ ಯಾರೂ ಬೇಕಿಲ್ಲ. ವೀರರ ಸ್ಮಾರಕ ನಿರ್ಮಾಣ ಕಾರ್ಯವನ್ನು ಮುಂದುವರಿಸುತ್ತೇನೆ. ಅಭಿವೃದ್ಧಿ ಮತ್ತು ಹಿಂದುತ್ವ ಎರಡನ್ನೂ ಬಿಡುವ ಪ್ರಶ್ನೆಯೇ ಇಲ್ಲ” ಎಂದರು.
ವೇದಿಕೆಯಲ್ಲಿ ಪ್ರಾಸ್ತಾವಿಕ ಮಾತಾನ್ನಾಡಿದ ಕಾರ್ಪೋರೇಟರ್ ವರುಣ್ ಚೌಟ ಅವರು, “ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವುದು ನಮ್ಮೆಲ್ಲರ ಬಹುದಿನಗಳ ಕನಸಾಗಿತ್ತು. ಶಾಸಕರ ಮುತುವರ್ಜಿಯಿಂದ ಇಲ್ಲಿ ಶಿವಾಜಿ ಸರ್ಕಲ್ ನಿರ್ಮಾಣವಾಗಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ವೇದಿಕೆಯಲ್ಲಿ ಪ್ರತಿಮೆ ನಿರ್ಮಿಸಿದ ಮನೋಜ್ ಕಣಪ್ಪಾಡಿ, ಸಂಸ್ಥೆಯ ಗೌರವಾಧ್ಯಕ್ಷ ವಿಜಯ್ ಕುಮಾರ್ ಅಮೀನ್, ಸೀತಾರಾಮ್ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕುಲಾಲ್, ಮುಡಾ ಎಇ ಆರತಿ, ಶನೀಶ್ವರ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ರೆಡ್ಡಿ, ಪ್ರಶಾಂತ್ ಮುಡಾಯಿಕೋಡಿ, ಪವಿತ್ರ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.