“ನಾನು ಕೋಮುವಾದಿಯಲ್ಲ, ನನಗೆ ರಾಷ್ಟ್ರಭಕ್ತರ ವೋಟ್ ಮಾತ್ರ ಸಾಕು” -ಡಾ. ಭರತ್ ಶೆಟ್ಟಿ

ಸುರತ್ಕಲ್: “ನಾನು ಕೋಮುವಾದಿಯಲ್ಲ, ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನಗೆ ಎಲ್ಲಾ ಧರ್ಮವೂ ಒಂದೇ, ನನಗೆ ರಾಷ್ಟ್ರಭಕ್ತರ ವೋಟ್ ಸಿಕ್ಕಿದ್ರೆ ಸಾಕು, ರಾಷ್ಟ್ರಭಕ್ತರ ವೋಟ್ ನಾನು ಕೇಳುತ್ತೇನೆ. ಹಿಂದೆ ಕೃಷ್ಣಾಪುರದ ಯುವಕ ಗೋಸಾಗಾಟ ಮಾಡುತ್ತಿದ್ದಾಗ ಪೊಲೀಸ್ ಗುಂಡೇಟಿಗೆ ಬಲಿಯಾದಾಗ ಆತನ ಕುಟುಂಬಕ್ಕೆ 15 ಲಕ್ಷ ಹಣವನ್ನು ಸರಕಾರದಿಂದ ಕೊಡಿಸಿದ್ದ ಮಾಜಿ ಶಾಸಕರು ಈಗ ಹಿಂದೂಗಳ ಮನೆಗೆ ಹೋಗಿ ಕಣ್ಣೀರು ಒರೆಸುವ ನಾಟಕವಾಡುತ್ತಿದ್ದಾರೆ. ಗೋಹತ್ಯೆ, ಲವ್ ಜಿಹಾದ್ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿಯ ಜೊತೆಗೆ ಪಕ್ಷದ ತತ್ವ ಸಿದ್ಧಾಂತವನ್ನು ಬಿಡುವ ಮಾತಿಲ್ಲ. 245 ಬೂತ್ ಗೆ ತಲಾ 8 ಲಕ್ಷ ರೂ. ನಂತೆ ಅನುದಾನ ಹಂಚಿದ್ದೇನೆ. ಹೀಗೆ ಒಟ್ಟಾರೆ 2000 ಕೋಟಿ ರೂ. ಅನುದಾನ ತಂದು ಕೆಲಸಕಾರ್ಯಗಳನ್ನು ಸಮರ್ಪಕವಾಗಿ ನಡೆಯುವಂತೆ ನೋಡಿಕೊಂಡಿದ್ದೇನೆ. ” ಎಂದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಪೂರ್ವ 2ನೇ ವಾರ್ಡ್ ಅಭಿವೃದ್ಧಿಗೆ 3.47 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಇಲ್ಲಿನ ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನ ವಠಾರದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು ಚಾಲನೆ ನೀಡಿದರು.


ಪ್ರಾಸ್ತಾವಿಕ ಮಾತನ್ನಾಡಿದ ಮನಪಾ ಸದಸ್ಯೆ ಶ್ವೇತಾ ಪೂಜಾರಿ ಅವರು, “ಅಭಿವೃದ್ಧಿ ಕಾಮಗಾರಿ ಹಿಂದೆ ಒಂದು ಸಮುದಾಯದ ಜನರಿಗೆ ಅವರ ಓಣಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಭರತ್ ಶೆಟ್ಟಿ ಅವರು ಶಾಸಕರಾದ ಬಳಿಕ ಸಮಾಜದ ಪ್ರತಿಯೊಂದು ಓಣಿ, ರಸ್ತೆ, ಪಾರ್ಕ್ ಹೀಗೆ ಮೂಲೆ ಮೂಲೆಯಲ್ಲೂ ಅಭಿವೃದ್ಧಿಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೋ ಕುಳಿತು ಅಭಿವೃದ್ಧಿ ಎಲ್ಲಿ ಆಗುತ್ತಿದೆ ಎಂದು ಪ್ರಶ್ನೆ ಮಾಡುವವರು ಒಮ್ಮೆ ನಮ್ಮ ಬೂತ್ ಮಟ್ಟದ ನಾಯಕರು, ಕಾರ್ಪೋರೇಟರ್ ಗಳನ್ನು ಸಂಪರ್ಕಿಸಿ ಲೆಕ್ಕ ಕೇಳಿ” ಎಂದರು.
ವೇದಿಕೆಯಲ್ಲಿ ಸತ್ಯಧರ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗಣೇಶ್ ಐತಾಳ್, ದೇವೇಂದ್ರ ಪೂಜಾರಿ, ಶೋಭಾ ರಾಜೇಶ್, ಉತ್ತರ ಮಂಡಲ ಶಕ್ತಿ ಕೇಂದ್ರದ ಅಧ್ಯಕ್ಷ ಮಹೇಶ್ ಮೂರ್ತಿ ಸುರತ್ಕಲ್, ಮುಡಾ ಅಧ್ಯಕ್ಷೆ ಕವಿತಾ ಪೈ ಉಪಸ್ಥಿತರಿದ್ದರು. ಪುಷ್ಪರಾಜ್ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

error: Content is protected !!