“ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಗರ ಕುತಂತ್ರ ರಾಜಕೀಯ ನಡೆಯುವುದಿಲ್ಲ” -ಮೊಯಿದೀನ್ ಬಾವಾ

ಸುರತ್ಕಲ್: “ಸುರತ್ಕಲ್ ನ ನೂತನ ಮಾರುಕಟ್ಟೆಗೆ 61 ಕೋಟಿ ರೂ. ಅನುದಾನ ತಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಶಂಕುಸ್ಥಾಪನೆ ನೆರವೇರಿಸಿದ್ದು 14 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದರೂ ಬಿಜೆಪಿ ಸರಕಾರ ಬಂದಮೇಲೆ ಅದಕ್ಕೆ ಗ್ರಹಣ ಹಿಡಿದಿದೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.


“ಮಾರುಕಟ್ಟೆ ಕಾಮಗಾರಿ ಇನ್ನೂ ಅಪೂರ್ಣವಾಗಿಯೇ ಉಳಿದಿದೆ. ಉಳಿದ ಹಣ ಮನಪಾದಲ್ಲಿ ಉಳಿದಿದೆ. ಹೀಗಿದ್ದರೂ ಕಾಮಗಾರಿ ಬಾಕಿ ಆಗಿದ್ದು ಯಾಕೆ? ಒಂದೊಮ್ಮೆ ನಾನು ಶಾಸಕನಾಗಿದ್ದರೆ ಸರಕಾರ ಯಾವುದೇ ಇರಲಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದೆ. ನಾನು ನೂತನ ಮಾರುಕಟ್ಟೆ ನಿರ್ಮಾಣ ಮಾಡುವಾಗ ಇದೇ ಬಿಜೆಪಿಯವರು ಮೀನು ಮಾರಾಟ ಮಾಡುವವರ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದು ಮರೆಯಲು ಸಾಧ್ಯವಿಲ್ಲ.
ಈಗ ಮತ್ತೆ ಅದೇ ಕಾಮಗಾರಿಗೆ 21 ಕೋಟಿ ರೂ. ಮೀಸಲು ಇರಿಸಲಾಗಿದೆ. ಇದು ಯಾವ ರಾಜಕೀಯ? 18 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್ ಜಂಕ್ಷನ್ ನಿಂದ ರೈಲ್ವೇ ಮೇಲ್ಸೇತುವೆ ತನಕ ಕಾಮಗಾರಿ ನಡೆಸುವಾಗಲೂ ಜನರನ್ನು ಪ್ರಚೋದಿಸಿ ಪ್ರತಿಭಟನೆ ನಡೆಸಿ ಕೆಲಸ ಅರ್ಧಕ್ಕೇ ನಿಲ್ಲಿಸಿದರು. ಒಟ್ಟಾರೆ ಸುರತ್ಕಲ್ ಅಭಿವೃದ್ಧಿ ಕುಂಟುತ್ತಾ ಸಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಚುನಾವಣೆ ಹತ್ತಿರ ಬರುವಾಗ ಆ ಕಾಮಗಾರಿ, ಈ ಕಾಮಗಾರಿ ಎಂದು ಗುದ್ದಲಿ ಪೂಜೆ ಮಾಡುವ ನಾಟಕ ಜನರಿಗೆ ತಿಳಿದಿದೆ. ಕೂಡಲೇ ಮಾರುಕಟ್ಟೆ ಕಾಮಗಾರಿಯನ್ನು ಆರಂಭಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡೆಕೇರಿ, ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ರಾಜೇಶ್ ಪೂಜಾರಿ, ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!