ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳಲು ಆಕಾಂಕ್ಷಿಗಳ ಮಧ್ಯೆ ಬಹಿರಂಗ ಸಮರ ನಡೆಯುತ್ತಿರುವಂತೆಯೇ ದಕ್ಷಿಣ ಕ್ಷೇತ್ರದಲ್ಲಿ ಹೊಸಮುಖಗಳಿಗೆ “ಕೈ” ಟಿಕೆಟ್ ನೀಡಬೇಕು ಎಂಬ ಕಾರ್ಯಕರ್ತರ ಒತ್ತಾಯ ಹೆಚ್ಚತೊಡಗಿದೆ. ಕ್ಷೇತ್ರದಲ್ಲಿ ಹಳೆಯ ಹುಲಿ ಆಗಿರುವ ಜೆ.ಆರ್. ಲೋಬೊ ಚುನಾವಣೆ ಸಮೀಪಿಸುತ್ತಿದ್ದಂತೆ ಕ್ಷೇತ್ರದಲ್ಲಿ ಹೆಚ್ಚು ಓಡಾಡಿಕೊಂಡಿದ್ದು ಇವರ ಮಧ್ಯೆ ಹೊಸಮುಖಗಳು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡು ಜನರಿಗೆ ಹತ್ತಿರವಾಗುತ್ತಿದ್ದಾರೆ. ಪ್ರಬಲ ಆಕಾಂಕ್ಷಿಗಳ ಸಾಲಲ್ಲಿ ಕೇಳಿ ಬರುತ್ತಿರುವ ಮೊದಲ ಹೆಸರೆಂದರೆ ಲಾರೆನ್ಸ್ ಡಿಸೋಜ ಅವರದ್ದು.
ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಲಾರೆನ್ಸ್ 2006ರಲ್ಲಿ ಕಾಂಗ್ರೆಸ್ ಸದಸ್ಯತ್ವ ಪಡೆದು ಬ್ಲಾಕ್ ಮತ್ತು ತಾಲೂಕು ಮಟ್ಟದಲ್ಲಿ ಅನೇಕ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. 2012ರಿಂದ 2017ರವರೆಗೆ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಪಕ್ಷದಲ್ಲಿ ಗುರುತಿಸಿಕೊಂಡವರು. ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ 2018-2020ರವರೆಗೆ ಸೇವೆ ಸಲ್ಲಿಸಿದ್ದ ಲಾರೆನ್ಸ್ ಪಕ್ಷದ ಕಾರ್ಯಕರ್ತರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ನಗರ ಪಾಲಿಕೆ ಚುನಾವಣೆಯಿಂದ ಹಿಡಿದು ವಿಧಾನಸಭಾ ಚುನಾವಣೆಯವರೆಗೆ ಪಕ್ಷದ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಪಕ್ಷದ ನಾಯಕರ ವಿಶ್ವಾಸ ಗಳಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ವಿವಿಧ ಕಾರ್ಯಕ್ರಮ, ಪ್ರತಿಭಟನೆಗಳನ್ನು ಸುಸೂತ್ರವಾಗಿ ನಿರ್ವಹಿಸಿರುವ ಲಾರೆನ್ಸ್ ಈ ಬಾರಿ ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಕೊಟ್ಟಲ್ಲಿ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ. ಎಲ್ಲಾ 16 ಬ್ಲಾಕ್ ಗಳ ಅಧ್ಯಕ್ಷರು, ಕಾರ್ಮಿಕ ವಿಭಾಗದ ಸದಸ್ಯರ ಜೊತೆ ನಿಕಟ ಸಂಪರ್ಕ ಇರಿಸಿಕೊಂಡಿದ್ದಾರೆ. ಕಾರ್ಮಿಕ ವಿಭಾಗದ ಅಡಿಯಲ್ಲಿ ಹಲವಾರು ಪ್ರತಿಭಟನೆಗಳನ್ನು ಹಮ್ಮಿಕೊಂಡಿರುವ ಲಾರೆನ್ಸ್ ಡಿಸೋಜ ಮೇಲೆ ಕ್ಷೇತ್ರದ ಕ್ರೈಸ್ತ ಮತದಾರರು ಮಾತ್ರವಲ್ಲದೆ ಎಲ್ಲಾ ಧರ್ಮಗಳ ಮತದಾರರು ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕ್ರೈಸ್ತ ಮತದಾರರ ಸಂಖ್ಯೆ ಹೆಚ್ಚಿದ್ದು ಇಲ್ಲಿನ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸಲಿದ್ದಾರೆ. ಕ್ಷೇತ್ರದಲ್ಲಿ ಹಳೆಯ ಮುಖಗಳಿಗೆ ಮತ್ತೆ ಮತ್ತೆ ಟಿಕೆಟ್ ಕೊಟ್ಟು ಅದೃಷ್ಟ ಪರೀಕ್ಷೆಗಿಳಿಸುವ ಬದಲು ಯುವಕರಿಗೆ ಆದ್ಯತೆ ನೀಡುವತ್ತ ಪಕ್ಷದ ವರಿಷ್ಠರು ಚಿಂತಿಸಬೇಕಿದೆ. ಲಾರೆನ್ಸ್ ಡಿಸೋಜ ಯುವಕರಲ್ಲಿ ಉತ್ಸಾಹ ತುಂಬುವ ಸ್ಫಟಿಕದಂತಹ ವ್ಯಕ್ತಿತ್ವ ಹೊಂದಿದ್ದು ಟಿಕೆಟ್ ಹೊಂದುವಲ್ಲಿ ಅದೇ ಮುಖ್ಯವಾಗಲಿದೆ.