ಮಂಗಳೂರಿನಲ್ಲಿ 69ನೇ ರಾಜ್ಯಮಟ್ಟದ ಸಹಕಾರ ಸಪ್ತಾಹ ಕಾರ್ಯಕ್ರಮ
ಮಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ಸಹಕಾರ ಮಾರಾಟ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ನೈತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ., ಮಂಗಳೂರು, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ರಿ. ಮಂಗಳೂರು, ಸಹಕಾರ ಇಲಾಖೆ ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಕೃಷಿ ಪತ್ತಿನ ಸಹಕಾರ ಸಂಘಗಳು, ಪಟ್ಟಣ ಸಹಕಾರ ಬ್ಯಾಂಕ್, ಸೌಹಾರ್ದ ಸಹಕಾರಿಗಳು ಹಾಗೂ ಎಲ್ಲಾ ವಿಧದ ಸಹಕಾರ ಸಂಘಗಳ ಸಹಯೋಗದೊಂದಿಗೆ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.
ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತಾಡಿದ ಅವರು, ರಾಜ್ಯದಲ್ಲಿ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿರುವುದು ಸಹಕಾರಿ ಕ್ಷೇತ್ರದ ಹೆಗ್ಗಳಿಕೆಯಾಗಿದೆ. ರಾಜ್ಯ ಸರಕಾರ ಜಾರಿಗೆ ತಂದಿದ್ದ ಯಶಸ್ವಿನಿ ಯೋಜನೆ ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಆದರೆ ಇದನ್ನು ಆರೋಗ್ಯ ಇಲಾಖೆ ಜೊತೆಗೆ ವಿಲೀನ ಮಾಡಿದ ಕಾರಣ ಮುಂದುವರಿಯಲಿಲ್ಲ. ಈಗ ಮತ್ತೆ ಕೃಷಿಕರು, ಸಹಕಾರಿಗಳು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ ಕಾರಣ ಮತ್ತೆ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರಲಾಗಿದೆ. ಮಂಗಳೂರಿನಲ್ಲಿ ಸಹಕಾರಿ ಕ್ಷೇತ್ರ ಎಷ್ಟರಮಟ್ಟಿಗೆ ಸಾಧನೆ ಮಾಡಿದೆ ಎನ್ನುವುದು ಸಪ್ತಾಹ ಕಾರ್ಯಕ್ರಮದಲ್ಲಿ ಸೇರಿರುವ ಅಪಾರ ಸಂಖ್ಯೆಯ ಸಹಕಾರಿಗಳೇ ಸಾಕ್ಷಿಯಾಗಿದ್ದಾರೆ. ರಾಜೇಂದ್ರ ಕುಮಾರ್ ಅವರನ್ನು ಕೆಣಕಿದರೆ ಯಾರೂ ಶಾಸಕರಾಗಲು ಸಾಧ್ಯವಿಲ್ಲ ಅನ್ನೋದನ್ನು ಮಂಗಳೂರು ಮಾತ್ರವಲ್ಲ ಉತ್ತರ ಕನ್ನಡದಲ್ಲೂ ಸಾವಿರಾರು ಸಂಖ್ಯೆಯ ಸಹಕಾರಿಗಳನ್ನು ಸೇರಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ” ಎಂದು ಹೇಳಿದರು.
ಬಳಿಕ ಮಾತಾಡಿದ ದೇವಿಪ್ರಸಾದ್ ಶೆಟ್ಟಿ ಬೆಳಪು ಅವರು, “12800 ಕೋಟಿ ವ್ಯವಹಾರ ನಡೆಸುವ ಮೂಲಕ ಎಸ್ ಸಿಡಿಸಿಸಿ ಬ್ಯಾಂಕ್ ಸಾಧನೆ ಮಾಡಿದ್ದರೆ ಅದಕ್ಕೆ ರಾಜೇಂದ್ರ ಕುಮಾರ್ ಅವರ ಕಾರ್ಯವೈಖರಿ ಕಾರಣವಾಗಿದೆ. ರಾಜೇಂದ್ರ ಕುಮಾರ್ ಅವರ ಸಾಧನೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಸಹಕಾರಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಲಕ್ಷಾಂತರ ನವೋದಯ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ ಮಹಿಳೆಯರ ಕೈಗೆ ಶಕ್ತಿ ತುಂಬಿರುವ ಎಂ.ಎನ್ ರಾಜೇಂದ್ರ ಕುಮಾರ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ” ಎಂದರು.
ವೇದಿಕೆಯಲ್ಲಿ ಉಭಯ ಜಿಲ್ಲೆಗಳ ಸಮಸ್ತ ಸಹಕಾರಿಗಳ ಪರವಾಗಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, “ದೇವರ ಆಶೀರ್ವಾದದಿಂದ ನಾನು ಎರಡನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನು ಇಷ್ಟು ಬೆಳೆಯಲು ಕಾರಣ ನೀವು. ನಾನು ಎನ್ನುವ ಪದ ಅಹಂಕಾರ ಸೂಚಕವಾಗಿದ್ದು ನನ್ನ ಏಳಿಗೆಯಲ್ಲಿ ಸಹಕಾರಿಗಳ ಪಾತ್ರ ಅಧಿಕವಾಗಿದೆ. ನಮ್ಮ ಜಿಲ್ಲೆಗೆ ಇದು ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರವಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಪರಿಗಣಿಸಿದ್ದಕ್ಕಾಗಿ ಸಚಿವರು ಮತ್ತು ಸರಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ಗೆಲುವು ಸಾಧ್ಯವಿದೆ. ನಮ್ಮ ನವೋದಯ ಸ್ವಸಹಾಯ ಗುಂಪಿನ ಸದಸ್ಯ ಮಹಿಳೆಯರು ನೂರಕ್ಕೆ ನೂರು ಶೇ. ಸಾಲ ಮರುಪಾವತಿ ಮಾಡಿರುವುದು ಸಂಘಟನೆಯ ಹೆಗ್ಗಳಿಕೆಯಾಗಿದೆ. ನಾರಿ ಶಕ್ತಿ ಮತ್ತು ಸಹಕಾರಿ ಶಕ್ತಿ ಒಂದಾದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ಎಂದರು.
ಮಂಗಳೂರು ಶಾಸಕ ಯು.ಟಿ. ಖಾದರ್ ಮಾತನಾಡಿ, “ಹತ್ತು ಕೈಗಳು ಒಂದೇ ಮನಸ್ಸಿನಿಂದ ಒಟ್ಟು ಸೇರಿದಾಗ ಮಾತ್ರ ಯಶಸ್ಸು ಸಾಧ್ಯ. ಇದು ಸಹಕಾರಿ ಕ್ಷೇತ್ರದಿಂದ ಸಾಧ್ಯವಾಗಿದೆ. ರಾಜೇಂದ್ರ ಕುಮಾರ್ ಅವರ ಅಹರ್ನಿಶಿ ಪರಿಶ್ರಮದಿಂದಾಗಿ ಸಹಕಾರಿಗಳು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ಕೆಎಂಎಫ್ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಹಾಲಿಗೆ ಏಕಾಏಕಿ ದರ ಏರಿಸುವ ಮೂಲಕ ಸರಕಾರ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಬಾರದು. ಅದರ ಬದಲು ಸರಕಾರ ಹಾಲು ಉತ್ಪಾದಕರಿಗೆ ಸಬ್ಸಿಡಿ ಕೊಡುವ ಮೂಲಕ ನೆರವಾಗಬೇಕೆಂದು ಮನವಿ ಮಾಡುತ್ತಿದ್ದೇನೆ” ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, “ದಕ್ಷಿಣ ಕನ್ನಡ ಜಿಲ್ಲೆಗೆ ರಾಜೇಂದ್ರ ಕುಮಾರ್ ಅವರು ನೀಡಿರುವ ಕೊಡುಗೆ ಸದಾ ಸ್ಮರಣೀಯ. ಕಳೆದ ಕೊರೋನ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಆಹಾರ ಕಿಟ್, ಕ್ವಾರಂಟೈನ್ ಕೇಂದ್ರ, ಆಂಬುಲೆನ್ಸ್ ಎಲ್ಲವನ್ನು ಒದಗಿಸುವ ಮೂಲಕ ಇವರು ಇತರರಿಗೆ ಮಾದರಿಯಾಗಿದ್ದಾರೆ. ಇಂಥವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಎಸ್ ಸಿಡಿಸಿಸಿ ಬ್ಯಾಂಕ್ ಇನ್ನಷ್ಟು ಸಾಧನೆಯ ಪಥದಲ್ಲಿ ಮುಂದುವರಿಯಲಿ” ಎಂದರು.
ವೇದಿಕೆಯಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟದಿಂದ ಸ್ಪೈಸಿ ಮಜ್ಜಿಗೆ ಹಾಗೂ ಉಪ್ಪುರಹಿತ ಬೆಣ್ಣೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.
ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಡಿ. ಕಾಮತ್, ಮಂಗಳೂರು ವಿಧಾನಸಭಾ ಕ್ಷೇತ್ರದ
ಶಾಸಕ ಯು.ಟಿ. ಖಾದರ್, ದ.ಕ.
ಮತ್ತು ಉಡುಪಿ ಜಿಲ್ಲಾ ಮೀನುಗಾರರ ಮಹಾಮಂಡಳ ನಿ.. ಮಂಗಳೂರು ಇದರ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ, ಕ್ಯಾಂಪ್ಕೊ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ, ಅದಾನಿ ಗ್ರೂಪ್ ನ ಕಿಶೋರ್ ಆಳ್ವ, ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಉಪಸ್ಥಿತರಿರಲಿದ್ದರು.
ಐದು ಮಂದಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ:
ಕರ್ನಾಟಕ ಸರಕಾರ ರಾಜ್ಯ ಮಟ್ಟದಲ್ಲಿ ನೀಡುವ ‘ಸಹಕಾರ
ರತ್ನ’ ಪ್ರಶಸ್ತಿಗೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಿಂದ ಈ ಬಾರಿ ಐವರು ಆಯ್ಕೆಗೊಂಡಿರುತ್ತಾರೆ.
ದಕ್ಷಿಣಕನ್ನಡ ಜಿಲ್ಲೆಯಿಂದ ಕೊಂಕೋಡಿ ಪದ್ಮನಾಭ, ನಿತ್ಯಾನಂದ ಮುಂಡೋಡಿ ಹಾಗೂ
ದಂಬೆಕಾನ ಸದಾಶಿವ ರೈ, ಉಡುಪಿ ಜಿಲ್ಲೆಯಿಂದ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಯಶ್‌ಪಾಲ್
ಸುವರ್ಣ ಇವರು ‘ಸಹಕಾರ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದು ಇವರನ್ನು ವೇದಿಕೆಯಲ್ಲಿ ಅತಿಥಿಗಳು ಸನ್ಮಾನಿಸಿದರು.
ಸಹಕಾರ ಜಾಥಾ:
ಬೆಳಗ್ಗೆ 9.00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಿಂದ ಸಮಾರಂಭ ನಡೆಯುವ ಕರಾವಳಿ ಉತ್ಸವ ಮೈದಾನದವರೆಗೆ ಸಹಕಾರಿಗಳು ವಾಹನದ ಮೂಲಕ ‘ಸಹಕಾರ ಜಾಥಾ’ ನಡೆಸಲಾಯಿತು.
ಟಿ.ಜಿ. ರಾಜರಾಮ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ನಿತೀಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.