ಸುರತ್ಕಲ್: ಇನಾಯತ್ ಅಲಿ ಅಭಿಮಾನಿ ಬಳಗ ಗುರುಪುರ ವಲಯ ಮತ್ತು ಲಯನ್ಸ್ ಕ್ಲಬ್ ಮುಚ್ಚೂರು ನೀರುಡೆ ಘಟಕ ಇದರ ಜಂಟಿ ಆಶ್ರಯದಲ್ಲಿ ಉಚಿತ ಜನಸ್ನೇಹಿ ಕಾರ್ಯಕ್ರಮ ಮತ್ತು ಅರೋಗ್ಯ ತಪಾಸಣಾ ಶಿಬಿರ ಇಲ್ಲಿನ ಗಂಜಿಮಠ ಒಂಡೆಲಾ ಹಾಲ್ ನಲ್ಲಿ ರವಿವಾರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನದ ಮಾತನ್ನಾಡಿದ ಅಬ್ದುಲ್ ಆಜೀಜ್ ದಾರಿಮಿ ಚೊಕ್ಕಬೆಟ್ಟು ಅವರು, “ಅಂತರಾಳದ ಕಣ್ಣು ತೆರೆದಿಡುವುದು ಎಲ್ಲರಿಂದ ಸಾಧ್ಯವಿಲ್ಲ. ಆದರೆ ಇನಾಯತ್ ಅಲಿ ಅವರ ಒಳಗಣ್ಣು ಸರಿಯಾಗಿ ತೆರೆದಿದೆ ಅನ್ನುವುದಕ್ಕೆ ಈ ಬೃಹತ್ ಕಾರ್ಯಕ್ರಮವೇ ಸಾಕ್ಷಿ. ಜನರಿಗೆ ನೋವಿನ ಬದಲು ಸಾಂತ್ವನ ನೀಡುವ ಮನಸ್ಸಿಗಿಂತ ಮಿಗಿಲಾದುದು ಬೇರೇನೂ ಇಲ್ಲ. ದೇಶದಲ್ಲಿ ಶತಮಾನಗಳಿಂದ ಇದ್ದ ಮಾನವತೆ ನಶಿಸುತ್ತಿದೆ. ಅದನ್ನು ಉಳಿಸಲು ನಾವೆಲ್ಲರೂ ಪಣತೊಡಬೇಕು. ಪರಸ್ಪರ ಬೆಳೆಯೋಣ, ಬದುಕು ಕಿತ್ತುಕೊಳ್ಳುವ ಬದಲು ಬದುಕಲು ಕಲಿಯೋಣ” ಎಂದರು.
ಬಳಿಕ ಮಾತಾಡಿದ ಕದ್ರಿ ಮಂಜುನಾಥ ದೇವಸ್ಥಾನದ ವೇದಮೂರ್ತಿ ವಿಠ್ಠಲದಾಸ ತಂತ್ರಿ ಅವರು, “ಸೇವೆ ಮಾಡುವುದು ಪರಮ ಧರ್ಮ, ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯು ಭಗವಂತನಿಗೆ ಪ್ರಿಯವಾದುದು. ಇದಕ್ಕೆ ಇನ್ನೊಂದು ಹೆಸರೇ ಇನಾಯತ್ ಅಲಿ. ಜಾತಿ ಧರ್ಮ ನೋಡದೆ ಎಲ್ಲರನ್ನೂ ನಮ್ಮವರೆಂದು ಕಾಣುವ ಇವರು ಇತರರಿಗೆ ಮಾದರಿಯಾಗಿದ್ದಾರೆ. ಸಂಪತ್ತು ಎಲ್ಲರಲ್ಲೂ ಇರಬಹುದು ಆದರೆ ಅದನ್ನು ಸಮಾಜದ ನೊಂದವರಿಗೆ ದಾನ ಮಾಡುವವ ದೇವರಿಗೆ ಸಮಾನ” ಎಂದರು.
ಬಳಿಕ ಮಾತು ಮುಂದುವರಿಸಿದ ಇನಾಯತ್ ಅಲಿ ಅವರು, “ಜನ ಸೇವೆಯೇ ಜನಾರ್ಧನ ಸೇವೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವ ಅಭಿಮಾನಿ ಬಳಗಕ್ಕೆ ಕೃತಜ್ಞತೆಗಳು. ಇಂತಹ ಸಮಾಜಮುಖಿ ಕಾರ್ಯಕ್ರಮಕ್ಕೆ ನಾನು ಸದಾ ನಿಮ್ಮ ಜೊತೆಯಲ್ಲಿ ಇರುತ್ತೇನೆ. ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು” ಎಂದರು.
ಇದೇ ಸಂದರ್ಭದಲ್ಲಿ ತೀವ್ರ ಬಡತನದಲ್ಲಿರುವ 24 ಕುಟುಂಬಗಳಿಗೆ ಇನಾಯತ್ ಅಲಿ ಆರ್ಥಿಕ ಸಹಾಯವನ್ನು ಹಸ್ತಾಂತರಿಸಿದರು. ಪರಿಸರದ ಹಿರಿಯ ವ್ಯಕ್ತಿಗಳು ಹಾಗೂ ಶಿಕ್ಷಕ, ಶಿಕ್ಷಕಿಯರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಅನಾರೋಗ್ಯ ಪೀಡಿತರಿಗೆ ಆರ್ಥಿಕ ಸಹಾಯ, ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್, ಆರ್ಥಿಕ ಸಹಾಯ ನೀಡಲಾಯಿತು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಅಬ್ದುಲ್ ಆಜೀಜ್ ದಾರಿಮಿ ಚೊಕ್ಕಬೆಟ್ಟು, ಎಂ.ಜಿ. ಹೆಗ್ಡೆ, ನೀರುಡೆ ಚರ್ಚ್ ಧರ್ಮಗುರು ಆಲ್ಬರ್ಟ್ ರಾಡ್ರಿಗಸ್, ಲಯನ್ಸ್ ಕ್ಲಬ್ ಮುಚ್ಚೂರು ಅಧ್ಯಕ್ಷ ಮೆಲ್ವಿನ್ ಡಿಸೋಜ, ಕದ್ರಿ ಮಂಜುನಾಥ ದೇವಸ್ಥಾನದ ವೇದಮೂರ್ತಿ ವಿಠ್ಠಲದಾಸ ತಂತ್ರಿ, ಸಿದ್ದಿಕ್, ಚಂದ್ರಹಾಸ್ ಪೂಜಾರಿ, ಲಯನ್ ಸ್ಟ್ಯಾನಿ ಮಿರಾಂದ, ಇನಾಯತ್ ಅಲಿ ಅಭಿಮಾನಿ ಬಳಗದ ಅಧ್ಯಕ್ಷ ಹಾಲಿಯಾ ಇಕ್ಬಾಲ್ ಉಪಸ್ಥಿತರಿದ್ದರು.