ಸುರತ್ಕಲ್-ಕಾನ-ಬಾಳ ನೂತನ ರಸ್ತೆಗೆ ಗುದ್ದಲಿಪೂಜೆ

 

19.85 ಕೋ. ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ

ಸುರತ್ಕಲ್: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಕಾನ ಬಾಳ ಮುಖ್ಯರಸ್ತೆಗೆ 19.85 ಕೋಟಿ ರೂ. ಅನುದಾನದಲ್ಲಿ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿ ಪೂಜೆಯು ಸೋಮವಾರ ಜರುಗಿತು. ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೈ.ಭರತ್ ಶೆಟ್ಟಿ ಅವರು ಗುದ್ದಲಿಪೂಜೆ ನೆರವೇರಿಸಿ ಮಾತಾಡಿದರು. “ದೇವಸ್ಥಾನ, ಪ್ರಾರ್ಥನಾ ಮಂದಿರ, ಶಾಲೆ, ರಸ್ತೆ ನಿರ್ಮಾಣದಲ್ಲಿ ರಾಜಕೀಯ ಮಾಡಬಾರದು. ಯಾಕೆಂದರೆ ಈ ಹಿಂದೆ ಸುರತ್ಕಲ್ ಕಾನ ಬಾಳ ರಸ್ತೆಗೆ ವಿಜೃಂಭಣೆಯಿಂದ ಗುದ್ದಲಿಪೂಜೆ ನಡೆದಿತ್ತು. ಚುನಾವಣೆಯ ಬಳಿಕ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದ್ದು ಈ ವೇಳೆ ಕಾಣದ ಕೈಗಳು ರಸ್ತೆ ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು. ಆಗ ಶಾಸಕನಾಗಿ ಈ ರಸ್ತೆ ಅಭಿವೃದ್ಧಿ ಆಗಲೇಬೇಕು ಎಂದು ಪಾದಯಾತ್ರೆ ಮಾಡಿದ್ದೇನೆ. ಅದರ ಪ್ರತಿಫಲ ಎಂಬಂತೆ ಈಗ 19.85 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಸುರತ್ಕಲ್ ಮತ್ತು ಕಾನ ಎರಡೂ ಕಡೆಗಳಿಂದ ಕಾಮಗಾರಿ ಆರಂಭವಾಗಲಿದೆ” ಎಂದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿಠ್ಠಲ್, ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಕಾರ್ಪೋರೇಟರ್ ಗಳಾದ ಸರಿತಾ ಶಶಿಧರ್, ಲೋಕೇಶ್ ಬೊಳ್ಳಾಜೆ, ಶ್ವೇತಾ ಪೂಜಾರಿ, ವರುಣ್ ಚೌಟ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷೆ ನಯನ ಕೋಟ್ಯಾನ್, ಶೋಭಾ ರಾಜೇಶ್, ಮಹಾಬಲ ಪೂಜಾರಿ ಕಡಂಬೋಡಿ, ಪುಷ್ಪರಾಜ್ ಸಸಿಹಿತ್ಲು ಉಪಸ್ಥಿತರಿದ್ದರು.

error: Content is protected !!