
ಮಂಗಳೂರು: ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವಲ್(41) ಇಸ್ರೇಲ್ ನಲ್ಲಿ ನಾಪತ್ತೆಯಾದ ಕುರಿತು ದೂರು ದಾಖಲಾಗಿದೆ.
ಶಡ್ರಕ್ ಇಮ್ಯಾನುವಲ್ ಅವರು ಮಂಗಳೂರಿನ ನೇಮಕಾತಿ ಸಂಸ್ಥೆಯೊಂದರ ಮೂಲಕ ಅಧಿಕೃತ ಉದ್ಯೋಗ ವೀಸಾ ಪಡೆದುಕೊಂಡು ದಿನಾಂಕ 2025ರ ಮೇ 16ರಂದು ಇಸ್ರೇಲ್ಗೆ ಪ್ರಯಾಣ ಬೆಳೆಸಿದ್ದರು. ಅವರು ಇಸ್ರೇಲ್ನ ನಜರೆತ್ ಸಮೀಪದ ನೊಫ್ ಹಗಲಿಲ್ ಎಂಬಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಪತ್ನಿ ಡೇಸಿ ಇಮ್ಯಾನುವಲ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಶಡ್ರಕ್ ಅವರು ನಿತ್ಯವೂ ಕುಟುಂಬದೊಂದಿಗೆ ವಾಟ್ಸ್ಆ್ಯಪ್ ಮೂಲಕ ಸಂಪರ್ಕದಲ್ಲಿದ್ದರು. ಆದರೆ, ಅಕ್ಟೋಬರ್ 16, 2026ರ ಶುಕ್ರವಾರ ರಾತ್ರಿ 8:05ರ ಸುಮಾರಿಗೆ ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕ ಸುಮಾರು 22 ನಿಮಿಷಗಳ ಕಾಲ ಕುಟುಂಬದೊಂದಿಗೆ ಮಾತನಾಡಿದ್ದರು. ಅದಾದ ನಂತರ ಅವರ ಮೊಬೈಲ್ ಸಂಪರ್ಕ ಸಂಪೂರ್ಣವಾಗಿ ಕಡಿದುಹೋಗಿದೆ. ಅಕ್ಟೋಬರ್ 18ರಂದು ಕುಟುಂಬಸ್ಥರು ಹಾಗೂ ಇಸ್ರೇಲ್ನಲ್ಲಿರುವ ಅವರ ಸ್ಥಳೀಯ ಸ್ನೇಹಿತರು ನಿರಂತರವಾಗಿ ವಾಟ್ಸ್ಆ್ಯಪ್ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕಂಪನಿಯ ಕೆಲಸದ ಸ್ಥಳದಲ್ಲೂ ಅವರು ಕಾಣಿಸದೆ ಇರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿರುವ ಕುಟುಂಬಸ್ಥರು ವಿದೇಶಾಂಗ ಸಚಿವಾಲಯ ಹಾಗೂ ರಾಯಭಾರ ಕಚೇರಿಯ ಮುಖಾಂತರ ಪತ್ತೆ ಕಾರ್ಯ ಚುರುಕುಗೊಳಿಸಲು ವಿನಂತಿಸಿಕೊಂಡಿದ್ದಾರೆ.
