
ಮಂಗಳೂರು: ಮೂಲ್ಕಿ ತಾಲೂಕಿನ ಹಳೆಯಂಗಡಿಯ ಪ್ರಮುಖ ಸಹಕಾರಿ ಸಂಸ್ಥೆಯಾದ “ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್” (ದ.ಕ. ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಟ್ಟಿದೆ) ತನ್ನ ವಿಸ್ತರಣಾ ಕಾರ್ಯದ ಮುಂದುವರಿದ ಭಾಗವಾಗಿ, ಉಡುಪಿಯ ಸನಿಲ್ ಪ್ಲಾಜಾದಲ್ಲಿ ತನ್ನ ನೂತನ 5ನೇ ಶಾಖೆಯನ್ನು ಆರಂಭಿಸುತ್ತಿದ್ದು, ಅಕ್ಟೋಬರ್ 25ನೇ ಆದಿತ್ಯವಾರದಂದು ಈ ಶಾಖೆಯ ಉದ್ಘಾಟನಾ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಶಸ್ತಿಗಳ ಗರಿಮೆ:
ಅಖಿಲ ಭಾರತ ಸಹಕಾರ ಸಪ್ತಾಹ 2025ರ ದಕ್ಷಿಣ ಕನ್ನಡ ಜಿಲ್ಲೆಯ ‘ಉತ್ತಮ ಪತ್ತಿನ ಸಹಕಾರ ಸಂಘ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿರುವ ಈ ಸಂಸ್ಥೆಯು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 2023-24, 2024-25 ಹಾಗೂ 2025-26ನೇ ಸಾಲಿನ ಪ್ರತಿಷ್ಠಿತ ‘ವಿಶಿಷ್ಟ ಸಾಧನ ಪ್ರಶಸ್ತಿ’ಗೂ ಭಾಜನವಾಗಿದೆ. ಗ್ರಾಹಕ ಕೇಂದ್ರಿತ ಸೇವೆಗಳು ಮತ್ತು ಪಾರದರ್ಶಕ ಆಡಳಿತದಿಂದಾಗಿ ಈ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿ ವಿಶೇಷ ಗುರುತನ್ನು ಪಡೆದುಕೊಂಡಿದೆ.
ಉದ್ಘಾಟನಾ ಸಮಾರಂಭದ ವಿವರಗಳು:
ಅಕ್ಟೋಬರ್ 25, 2026ರ ಆದಿತ್ಯವಾರದಂದು ಪೂರ್ವಾಹ್ನ 10.30 ಗಂಟೆಗೆ ಉಡುಪಿಯ ಸನಿಲ್ ಪ್ಲಾಜಾದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಮುಲ್ಕಿ ಅರಮನೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಅವರು ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಐವನ್ ಡಿ’ಸೋಜ ಅವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಕೆ.ಅಭಯಚಂದ್ರ ಜೈನ್ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಮ್ ರೈ ಅವರು ನೂತನ ಕಂಪ್ಯೂಟರ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ. ಕೆ.ಎಂ.ಎಫ್. ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ನಿರ್ದೇಶಕರಾದ ಡಾ.ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ಅವರು ‘ಪ್ರಿಯದರ್ಶಿನಿ ಸ್ವ-ಸಹಾಯ ಗುಂಪು’ಗಳಿಗೆ ಚಾಲನೆ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ., ಲೊಂಬಾರ್ಡ್ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕರಾದ ಡಾ| ಸುಶೀಲ್ ಜತ್ತನ್ನ, ಉಡುಪಿ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಕಾಂಚನ್ ಸೇರಿದಂತೆ ಸ್ಥಳೀಯ ಗಣ್ಯರು, ಸಹಕಾರಿ ಧುರೀಣರು ಭಾಗವಹಿಸಲಿದ್ದಾರೆ.
ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯಗಳು:
ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಈ ಸೊಸೈಟಿಯು ಆರ್.ಟಿ.ಜಿ.ಎಸ್. / ನೆಫ್ಟ್ (RTGS/NEFT) ಸೌಲಭ್ಯ, ಯುಪಿಐ (UPI / Scan & Pay), ಮೊಬೈಲ್ ಬ್ಯಾಂಕಿಂಗ್, ಹವಾನಿಯಂತ್ರಿತ ಬ್ಯಾಂಕಿಂಗ್ ವಿಭಾಗ, ಊಟದ ವಿರಾಮವಿಲ್ಲದ ನಿರಂತರ ವ್ಯವಹಾರ, ಇ-ಸ್ಟ್ಯಾಂಪ್ ಸೌಲಭ್ಯ, ಉತ್ಕೃಷ್ಟ ದರ್ಜೆಯ ಸೇಫ್ ಲಾಕರ್, ಎಸ್ಎಂಎಸ್ ಸಂದೇಶ ರವಾನೆ ಹಾಗೂ ಸಂಪೂರ್ಣ ಸಿಸಿ ಕ್ಯಾಮರಾ ಕಣ್ಣಾವಲಿನ ಭದ್ರತೆಯನ್ನು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ‘0’ ಬ್ಯಾಲೆನ್ಸ್ ಉಳಿತಾಯ ಖಾತೆ ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ ಸ್ವ-ಸಹಾಯ ಗುಂಪುಗಳ ವ್ಯವಸ್ಥೆ ಮಾಡಲಾಗಿದೆ.

ಪ್ರಾರಂಭೋತ್ಸವದ ವಿಶೇಷ ಕೊಡುಗೆ:
ಸಂಸ್ಥೆಯಲ್ಲಿ 2026ರ ನವೆಂಬರ್ 15ರ ವರೆಗೆ ನಿರಖು ಠೇವಣಿಯನ್ನು ಇಡುವವರಿಗೆ ವಿಶೇಷ ಆಕರ್ಷಣೆಯಾಗಿ ಶೇ. 10ರವರೆಗೆ ಅತ್ಯಧಿಕ ಬಡ್ಡಿದರದ ಪ್ರಾರಂಭೋತ್ಸವದ ಕೊಡುಗೆ ಲಭ್ಯವಿರುತ್ತದೆ. ಹಿರಿಯ ನಾಗರಿಕರು, ವಿಧವೆಯರು, ಮಾಜಿ ಸೈನಿಕರು, ಅಂಗವಿಕಲರು ಹಾಗೂ ಸಂಘ-ಸಂಸ್ಥೆಗಳ 1 ವರ್ಷ ಮತ್ತು ಮೇಲ್ಪಟ್ಟ ಠೇವಣಿಗಳಿಗೂ ಸಹ ವಿಶೇಷ ಬಡ್ಡಿದರ ನೀಡಲಾಗುತ್ತಿದೆ. ಇದರೊಂದಿಗೆ ವಾಹನ ಸಾಲ, ಚಿನ್ನಾಭರಣ ಸಾಲ, ಗೃಹ ಸಾಲ, ಅಲ್ಪಾವಧಿ ಸಾಲ ಹಾಗೂ ಆಸ್ತಿ ಅಡಮಾನ ಸಾಲ ಸೌಲಭ್ಯಗಳು ಲಭ್ಯವಿವೆ.
ಈ ಶುಭ ಸಮಾರಂಭಕ್ಕೆ ಸಹಕಾರಿ ಬಂಧುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ಎಚ್.ವಸಂತ್ ಬೆರ್ನಾರ್ಡ್, ಉಪಾಧ್ಯಕ್ಷ ವಿಜಯ ಕುಮಾರ್ ಸನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಪೂಜಾರಿ, ನಿರ್ದೇಶಕರು ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಪ್ರಕಟಣೆಯಲ್ಲಿ ಕೋರಿದ್ದಾರೆ.
