
ವಿಶೇಷ ವರದಿ: ಗಿರೀಶ್ ಮಣೇಲ್
ಸಮಯ ಬೆಳಗಿನ ಜಾವ ಆರು ಗಂಟೆ. ಊರೆಲ್ಲಾ ಇನ್ನೂ ನಿದ್ರೆಯ ಮಂಪರಿನಲ್ಲಿದ್ದರೆ, ದಕ್ಷಿಣ ಕನ್ನಡದ ಈ ರಸ್ತೆಗಳಲ್ಲಿ ಮಾತ್ರ ಇತಿಹಾಸ ಬದಲಾಗುತ್ತಿತ್ತು. ಕೈಯಲ್ಲಿ ಮೈಕ್ ಹಿಡಿದು, ಕ್ಯಾಮೆರಾ ಕಣ್ಣಿನಲ್ಲಿ ಜಗತ್ತಿನ ಕದನಗಳನ್ನು ಸೆರೆಹಿಡಿಯಬೇಕಿದ್ದ ಆ ಬೆರಳುಗಳು, ಅಂದು ಹಾರೆ-ಪೊರಕೆ ಹಿಡಿದು ನಿಂತಿದ್ದವು. ಇದು ಕೇವಲ ಒಂದು ತಂಡದ ಕತೆಯಲ್ಲ; ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದು, ಸ್ವತಃ ತಾವೇ ಕಣಕ್ಕಿಳಿದು ಸಮಾಜದ ಮಸಿ ತೊಳೆಯುತ್ತಿರುವ ಯುವ ಪತ್ರಕರ್ತರ ‘ಮೀಡಿಯಾ ಮನಸುಗಳು’ ನಡೆಸಿದ ಸದ್ದಿಲ್ಲದ ಸಾಹಸಯಾತ್ರೆ!

ಹಳೆಯಂಗಡಿಯ ಹೆದ್ದಾರಿ ಸರ್ವಿಸ್ ರಸ್ತೆಯ ಆ ಬಸ್ ನಿಲ್ದಾಣದತ್ತ ಒಮ್ಮೆ ಕಣ್ಣಾಡಿಸಿ. ನಿತ್ಯ ಸಾವಿರಾರು ಜೀವಗಳು ಬಸ್ ಗಾಗಿ ಕಾದು ಕೂರುವ ಆ ಜಾಗ, ಒಂದಷ್ಟು ಕಾಲ ಕುಡುಕರ ಅಡ್ಡೆಯಾಗಿ, ಕಸದ ಕೊಂಪೆಯಾಗಿ ಅಧೋಗತಿಗೆ ತಲುಪಿತ್ತು. ವರದಿಗಳು ಬಂದವು, ಅಧಿಕಾರಿಗಳ ಕಣ್ಣಿಗೆ ಮಣ್ಣು ಬಿತ್ತು, ಮೌನವೇ ಆಡಳಿತದ ಉತ್ತರವಾಯಿತು. ಆಗ ಎಚ್ಚೆತ್ತುಕೊಂಡಿದ್ದೇ ಈ ಯುವ ಮನಸುಗಳು. “ನಾವು ಕೇವಲ ಸುದ್ದಿ ಮಾಡುವುದಿಲ್ಲ, ಬದಲಾವಣೆಯ ದಾರಿದೀಪವೂ ಆಗಬಲ್ಲೆವು” ಎಂದು ಗಂಟೆಗಳ ಕಾಲ ಬೆವರು ಹರಿಸಿ, ಗಿಡಗಂಟಿಗಳನ್ನು ಕಡಿದು, ನೀರು ಹಾಕಿ ತೊಳೆದು, ಆ ತಂಗುದಾಣಕ್ಕೆ ಹೊಸ ಜೀವ ತುಂಬಿದರು. ಅಲ್ಲಿಂದ ಶುರುವಾಯಿತು ನೋಡಿ, ಮಂಗಳೂರಿನ ಬೀದಿಗಳಲ್ಲಿ ಒಂದು ಹೊಸ ಬೆಳಕಿನ ಅಲೆ.

ಇದೇ ಕತೆ ಕಾವೂರು ಜ್ಯೋತಿನಗರದಲ್ಲೂ ಮರುಕಳಿಸಿತು. ಅನಾಥವಾಗಿ ಶಾಪಗ್ರಸ್ತವಾಗಿ ಬಿದ್ದಿದ್ದ ಆ ನಿಲ್ದಾಣಕ್ಕೆ ಹೋಗಿ ನಿಂತಾಗ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಣ್ಣಿಗೆ ರಾಚಿತು. ತಡಮಾಡಲಿಲ್ಲ ಆ ಬಳಗ, ಹಾರೆ ಪೊರಕೆ ಹಿಡಿದು ಕೆಲವೇ ಗಂಟೆಗಳಲ್ಲಿ ಆ ಜಾಗವನ್ನು ಕಣ್ಣಿಗೆ ಮುದ ನೀಡುವಂತೆ ಬೆಳಗಿಸಿದರು. ದೇವರೆಬೈಲ್ ನ ಕಸದ ತೊಟ್ಟಿಯಂತಿದ್ದ ಬಸ್‌ಸ್ಟ್ಯಾಂಡ್‌ನ ದುಸ್ಥಿತಿಯನ್ನು ಕಂಡು ಕರಗಿದ ಇವರ ಒಂದು ವಿಡಿಯೋ, ಸಮಾಜಪರ ಕಾಳಜಿಯ ಕರಗಳ ಕೈಯಿಂದಲೇ ಸ್ವಚ್ಛತೆಗೆ ನಾಂದಿಹಾಡಿಸಿತು. ಮಾಧ್ಯಮದ ಧ್ವನಿ ಎಷ್ಟರಮಟ್ಟಿಗೆ ಮುಟ್ಟುತ್ತದೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?

ಕೂಳೂರಿನ ಕುದ್ರೆಮುಖ ಕಂಪೆನಿ ಎದುರು ಸ್ಮಾರ್ಟ್ ಸಿಟಿಯ ಹೆಸರಿನಲ್ಲಿ ಸೊರಗಿದ್ದ ತಂಗುದಾಣವಿರಲಿ, ಅಥವಾ ದೇಶದ ಪ್ರತಿಷ್ಠಿತ ಎನ್.ಐ.ಟಿ.ಕೆ. (NITK) ಕಾಲೇಜಿನ ಎದುರೇ ಡಂಪಿಂಗ್ ಯಾರ್ಡ್‌ನಂತೆ ಮಾರ್ಪಟ್ಟಿದ್ದ ನಿಲ್ದಾಣವಿರಲಿ—ಎಲ್ಲೆಲ್ಲಿ ವ್ಯವಸ್ಥೆ ಕಣ್ಣು ಮುಚ್ಚಿಕೊಂಡಿತೋ, ಅಲ್ಲೆಲ್ಲ ಈ ಪತ್ರಕರ್ತರು ಅಧಿಕಾರಿಗಳ ಕಣ್ಣು ತೆರೆಸುವ ಕಾಯಕ ಮಾಡಿದರು. ಕುಳಾಯಿ ಹೊನ್ನಕಟ್ಟೆ ಮತ್ತು ಹೊಸಬೆಟ್ಟು ಬಸ್ ನಿಲ್ದಾಣಗಳಲ್ಲಿ ಮುಂಜಾನೆಯ ಶ್ರಮದಾನದ ಮೂಲಕ ಕೇವಲ ಮೂರು ಗಂಟೆಗಳಲ್ಲಿ ತ್ಯಾಜ್ಯದ ರಾಶಿಯನ್ನು ಹೆಕ್ಕಿ ತೆಗೆದು ವಿಲೇವಾರಿ ಮಾಡಿಸಿ ಸಾರ್ವಜನಿಕರ ನಿಟ್ಟುಸಿರಿಗೆ ಕಾರಣರಾದರು.

ಕೇವಲ ಕಸ ಗುಡಿಸುವುದಕ್ಕಷ್ಟೇ ಇವರ ಹೆಜ್ಜೆಗಳು ಸೀಮಿತವಾಗಿರಲಿಲ್ಲ, ಜನರ ಜೀವ ಉಳಿಸುವ ಮಹಾಪರಿವರ್ತನೆಯೂ ಅಲ್ಲಿತ್ತು. ಕಿನ್ನಿಗೋಳಿ, ಸುರತ್ಕಲ್ ನಲ್ಲಿ ರಾತ್ರಿಯ ಕತ್ತಲಲ್ಲಿ ಸಾವಿಗೆ ಆಹ್ವಾನ ನೀಡುತ್ತಿದ್ದ ಅಪಾಯಕಾರಿ ಹಂಪ್ಸ್‌ಗಳು ದ್ವಿಚಕ್ರ ವಾಹನ ಸವಾರರ ಪಾಲಿಗೆ ನುಂಗಲಾರದ ತುತ್ತಾಗಿದ್ದವು. ಇದನ್ನು ಅರಗಿಸಿಕೊಳ್ಳಲಾರದ ಈ ಯುವಪಡೆ, ಹಗಲಿಡೀ ನೂರಾರು ವಾಹನಗಳ ದಟ್ಟಣೆ ಮುಗಿದ ಬಳಿಕ, ಮಧ್ಯರಾತ್ರಿಯ ಕತ್ತಲಲ್ಲಿ ರಸ್ತೆಗಿಳಿಯಿತು. ಜೀವಕಂಟಕ ಹಂಪ್ಸ್‌ಗಳಿಗೆ ಬಿಳಿ ಬಣ್ಣ ಬಳಿದು, ಫಳಫಳನೆ ಹೊಳೆಯುವಂತೆ ಮಾಡಿ, ನೂರಾರು ಜೀವಗಳ ನಲ್ಮೆಗೆ ಕಾವಲಾದರು.

ಇಲ್ಲಿರುವುದು ಯಾರೂ ಸರ್ಕಾರದ ಅಧಿಕಾರಿಗಳಲ್ಲ, ಯಾರ ಮೇಲೂ ಕೋಟ್ಯಂತರ ರೂ. ಅನುದಾನದ ಹೊಣೆಯಿಲ್ಲ. ಇರುವುದು ಕೇವಲ ಎದೆತುಂಬಿದ ಕಾಳಜಿ ಮತ್ತು ಛಲವಷ್ಟೇ. ವೃತ್ತಿಪರ ಬದುಕಿನ ಸಾವಿರ ಜಂಜಾಟಗಳು, ನಿದ್ದೆಯಿಲ್ಲದ ರಾತ್ರಿಗಳು, ಡೆಡ್‌ಲೈನ್‌ಗಳ ಒತ್ತಡ—ಇಷ್ಟೆಲ್ಲದರ ನಡುವೆಯೂ ಸಮಾಜದ ಕಷ್ಟಕ್ಕೆ ಹೆಗಲುಕೊಡುವ ಈ ಯುವಕರ ಬದ್ಧತೆ ನಿಜಕ್ಕೂ ಅನನ್ಯ.

ಸ್ವಚ್ಛತೆಯ ಈ ಸಮಾಜಮುಖಿ ಅಭಿಯಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮೀಡಿಯಾ ಮನಸುಗಳು ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ರಜನ್ ಕುಮಾರ್ ಕಾವೂರು, ಶಿವು ಕುಲಾಲ್ ಹಾಗೂ ಬಾಲಕೃಷ್ಣ ಶೆಟ್ಟಿ ಸೂರಿಂಜೆ, ಸಂದೇಶ್ ಶೆಟ್ಟಿ, ಅನೂಪ್ ಸೂರಿಂಜೆ, ರಾಕೇಶ್ ಎಕ್ಕಾರ್, ಸಂತೋಷ್ ಹೊಸಬೆಟ್ಟು ಸಕ್ರಿಯವಾಗಿ ಭಾಗವಹಿಸಿ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದಾರೆ.
ಈವರೆಗೆ ಇಂತಹ ಹತ್ತು ಯಶಸ್ವಿ ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ತಂಡದ ಸಾಧನೆ ಇತರರಿಗೆ ಮಾದರಿಯಾಗಿದ್ದು, ಇವರ ಸ್ಪೂರ್ತಿದಾಯಕ ಸೇವೆಯನ್ನು ಕಂಡು ಇನ್ನೂ ಹಲವಾರು ಮಂದಿ ಯುವಕರು ಸ್ವಯಂಪ್ರೇರಿತರಾಗಿ ಈ ತಂಡಕ್ಕೆ ಸೇರಲು ಹಾತೊರೆಯುತ್ತಿದ್ದಾರೆ.

ಬದಲಾವಣೆ ಎನ್ನುವುದು ಯಾವುದೋ ದೂರದ ಭ್ರಮೆಯಲ್ಲ; ಅದು ನಮ್ಮ ನಡುವೆಯೇ ಇರುವ ಕೆಲ ಜವಾಬ್ದಾರಿಯುತ ಕೈಗಳ ಸ್ಪರ್ಶದಿಂದ ಮಾತ್ರ ಸಾಧ್ಯ ಎಂಬುದನ್ನು ‘ಮೀಡಿಯಾ ಮನಸುಗಳು’ ಸಾಬೀತುಪಡಿಸಿವೆ. ಆಡಳಿತ ವ್ಯವಸ್ಥೆ ಎಷ್ಟೇ ಮೈಮರೆತರೂ, ಎಚ್ಚೆತ್ತುಕೊಳ್ಳುವ ಕಣ್ಣುಗಳೂ, ಮಿಡಿಯುವ ಹೃದಯಗಳೂ ಇದ್ದರೆ ಈ ಸಮಾಜವನ್ನು ಸುಂದರವಾಗಿಸಬಹುದು ಎಂಬುದಕ್ಕೆ ಈ ಪತ್ರಕರ್ತರ ಪಡೆಯೇ ಇಂದಿನ ಅಕ್ಷರಶಃ ಜೀವಂತ ಸಾಕ್ಷಿ!