
ಸುರತ್ಕಲ್: ಕೃಷಿ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗುವಂತೆ ಕೃಷಿಕರಿಗೆ ಅಗತ್ಯವಾದ ಸಲಕರಣೆಗಳು, ತಂತ್ರಜ್ಞಾನ ಹಾಗೂ ಕೃಷಿ ಸಂಬಂಧಿತ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಉದ್ದೇಶದಿಂದ ಸುರತ್ಕಲ್‌ನಲ್ಲಿ ಪ್ರಪ್ರಥಮ ಬಾರಿಗೆ ಕೃಷಿ ಮೇಳ ಹಾಗೂ ಆಹಾರ ಮೇಳ ಆಯೋಜಿಸಲಾಗಿದೆ ಎಂದು ಆಯೋಜಕರಲ್ಲಿ ಒಬ್ಬರಾದ ರೈತ ಕುಡ್ಲ ಪ್ರತಿಷ್ಠಾನದ ಅಧ್ಯಕ್ಷ ಭರತ್ ರಾಜ್ ಸೊರಕೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಸುರತ್ಕಲ್ ಮತ್ತು ಬಂಟರ ಸಂಘ (ರಿ.) ಸುರತ್ಕಲ್ ಸಹಯೋಗದಲ್ಲಿ ಈ ಮೇಳವನ್ನು ಆಯೋಜಿಸಲಾಗಿದ್ದು, ಸೆಪ್ಟೆಂಬರ್ 25, 26 ಮತ್ತು 27ರಂದು ಸುರತ್ಕಲ್‌ನ ಬಂಟರ ಭವನದಲ್ಲಿ ನಡೆಯಲಿದೆ. ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಸಾರ್ವಜನಿಕರಿಗೆ ಮೇಳ ವೀಕ್ಷಿಸಲು ಅವಕಾಶವಿದೆ.
ಕೃಷಿ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ನವೀನ ಉಪಕರಣಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೃಷಿ ಕಾರ್ಯವನ್ನು ಸುಲಭಗೊಳಿಸುವ ವಿವಿಧ ಸಲಕರಣೆಗಳ ಪರಿಚಯ, ಅವುಗಳ ಬಳಕೆ ಹಾಗೂ ಲಭ್ಯತೆ ಕುರಿತು ಕೃಷಿಕರಿಗೆ ಮಾಹಿತಿ ನೀಡುವುದು ಮೇಳದ ಪ್ರಮುಖ ಉದ್ದೇಶವಾಗಿದೆ. ಕೃಷಿ ಸಲಕರಣೆಗಳ ಮಾಹಿತಿ ಮತ್ತು ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕೃಷಿಕರು ತಮ್ಮ ಅಗತ್ಯಕ್ಕೆ ತಕ್ಕ ಉಪಕರಣಗಳನ್ನು ನೇರವಾಗಿ ವೀಕ್ಷಿಸಿ, ಅವುಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಮೇಳ ಸಹಕಾರಿಯಾಗಲಿದೆ. ಕೃಷಿ ಕ್ಷೇತ್ರಕ್ಕೆ ಪೂರಕವಾಗಿರುವ ವಿವಿಧ ಸಲಕರಣೆಗಳ ಮಾರಾಟ ಮಳಿಗೆಗಳೂ ಮೇಳದಲ್ಲಿ ಇರಲಿವೆ ಎಂದು ಮಾಹಿತಿ ನೀಡಿದರು.
ಮನೆ ತೋಟ, ಕೈತೋಟ ಹಾಗ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರಿಗೂ ಮೇಳ ಉಪಯುಕ್ತವಾಗಲಿದೆ. ಸಸಿ ಬೆಳೆಸುವಿಕೆ, ತೋಟಗಾರಿಕೆ ಹಾಗೂ ಕೃಷಿ ಕಾರ್ಯಗಳಿಗೆ ಬೇಕಾಗುವ ಸಾಮಗ್ರಿಗಳ ಪರಿಚಯ ಮತ್ತು ಮಾರಾಟಕ್ಕೆ ಅವಕಾಶವಿರುವುದರಿಂದ ನಗರ ಪ್ರದೇಶದ ತೋಟಗಾರಿಕೆ ಆಸಕ್ತರೂ ಮೇಳದ ಪ್ರಯೋಜನ ಪಡೆಯಬಹುದಾಗಿದೆ.
ಆಹಾರ ಮೇಳದ ವಿಶೇಷತೆ:
ಕೃಷಿ ಮೇಳದ ಜತೆಗೆ ಆಹಾರ ಮೇಳವೂ ನಡೆಯಲಿದ್ದು, ವಿವಿಧ ಆಹಾರ ಉತ್ಪನ್ನಗಳ ಪರಿಚಯ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೃಷಿ ಮತ್ತು ಆಹಾರ ಸಂಸ್ಕೃತಿಯ ನಡುವಿನ ಸಂಬಂಧವನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ಆಹಾರ ಮೇಳವೂ ಪ್ರಮುಖ ಆಕರ್ಷಣೆಯಾಗಲಿದೆ.
ಕೃಷಿಕರು, ತೋಟಗಾರಿಕೆ ಆಸಕ್ತರು, ಮಹಿಳೆಯರು, ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೇಳದ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ, ಲತೀಶ್ ಮಳಲಿ ಮತ್ತಿತರರು ಉಪಸ್ಥಿತರಿದ್ದರು.