ಕೋಮಾ ಸ್ಥಿತಿಯಲ್ಲಿ ಬೀದರ್ ಶಾಹೀನ್ ಸಂಸ್ಥೆಯ ವಿದ್ಯಾರ್ಥಿನಿ: ಆರೋಗ್ಯ ಸಚಿವ ಯು.ಟಿ.ಖಾದರ್ ಅವರಿಂದ ನೋ ರೆಸ್ಪಾನ್ಸ್! ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಪೋಷಕರ ಆಗ್ರಹ

ಮಂಗಳೂರು: ಬೀದರ್‌ನ ಶಾಹೀನ್ ಗ್ರೂಪ್ ಅಫ್ ಇನ್ಸ್ಟಿಟ್ಯೂಷನ್ ನಲ್ಲಿ ವ್ಯಾಸಂಗ ಮಾಡುತ್ತಿರುವ ಮಂಗಳೂರಿನ ವಿದ್ಯಾರ್ಥಿನಿ ಯುಮ್ನ ಹಾಸ್ಟೆಲ್‌ನಲ್ಲಿ ಅಸ್ವಸ್ಥಗೊಂಡು, ಪ್ರಸ್ತುತ ಮಂಗಳೂರಿನ KMC ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಘಟನೆಗೆ ಸಂಬಂಧಿಸಿದಂತೆ ಆಕೆಯ ತಂದೆ ಶೇಖ್ ಅಷ್ಫಕ್ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಸಮಸ್ಯೆ ಹೇಳಿದ್ದರೂ ಅವರಿಂದ ಯಾವುದೇ ರೆಸ್ಪಾನ್ಸ್ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಗೆ ಹಾಸ್ಟೆಲ್‌ನಲ್ಲಿ ತೀವ್ರ ಅನಾರೋಗ್ಯ ಹಾಗೂ ಹೊಟ್ಟೆನೋವು ಕಾಣಿಸಿಕೊಂಡ ಸಂದರ್ಭದಲ್ಲಿ ಆಕೆಯನ್ನು ಹಾಸ್ಟೆಲ್‌ನ ನರ್ಸಿಂಗ್ ಘಟಕಕ್ಕೆ ಕರೆದೊಯ್ಯಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರಗೊಂಡ ಹಿನ್ನೆಲೆಯಲ್ಲಿ ಸೂಕ್ತ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಥವಾ ಆಸ್ಪತ್ರೆಗೆ ದಾಖಲಿಸುವ ಕ್ರಮ ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ಪೋಷಕರು ಪ್ರಶ್ನೆಗಳನ್ನು ಎತ್ತಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ಮಂಗಳೂರಿನ KMC ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಆಕೆ ಕೋಮಾ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಗೆ ನೀಡಲಾಗುತ್ತಿರುವ ಔಷಧಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರಿಂದ ತಿಳಿದುಬಂದಿದೆ ಎಂದು ಪೋಷಕರು ಪತ್ರಿಕಾಗೋಷ್ಟಿಯಲ್ಲಿ ಅಳಲು ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿನಿಯ ಚಿಕಿತ್ಸೆಗೆ 35 ಲಕ್ಷಕ್ಕೂ ಅಧಿಕ ಹಣ ವೆಚ್ಚವಾಗಿದೆ ಎಂದು ಪೋಷಕರು ತಿಳಿಸಿದ್ದಾರೆ. ಮಗಳ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕುಟುಂಬವು ತೀವ್ರ ಮಾನಸಿಕ ಹಾಗೂ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಆಕೆಯ ಚಿಕಿತ್ಸೆಗೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ವಿದ್ಯಾರ್ಥಿನಿಯನ್ನು ಮಂಗಳೂರಿನ KMC ಆಸ್ಪತ್ರೆಗೆ ದಾಖಲಿಸಿದ ನಂತರವೂ ಶಾಹೀನ್ ಸಂಸ್ಥೆಯ ಆಡಳಿತ ಮಂಡಳಿ ಅಥವಾ ಕಾಲೇಜಿನ ಸಂಬಂಧಪಟ್ಟ ನಿರ್ವಹಣಾ ಸಿಬ್ಬಂದಿಯಿಂದ ತಮ್ಮ ಕುಟುಂಬಕ್ಕೆ ಯಾವುದೇ ದೂರವಾಣಿ ಕರೆ ಅಥವಾ ಸಮರ್ಪಕ ವಿಚಾರಣೆ ನಡೆದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ತಮ್ಮ ಮಗಳು ಜೀವನ್ಮರಣದ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಸಂಸ್ಥೆಯ ಆಡಳಿತದಿಂದ ಕನಿಷ್ಠ ಮಾನವೀಯ ಕಾಳಜಿ ಮತ್ತು ವಿಚಾರಣೆ ಕೂಡ ವ್ಯಕ್ತವಾಗದಿರುವುದು ತಮಗೆ ತೀವ್ರ ನೋವುಂಟು ಮಾಡಿದೆ ಎಂದು ಪೋಷಕರು ಹೇಳಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದ ನಂತರ ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿಯ ಕುಟುಂಬದೊಂದಿಗೆ ಸಂಪರ್ಕ ಸಾಧಿಸುವುದು ಹಾಗೂ ಅಗತ್ಯ ಸಹಕಾರ ನೀಡುವುದು ಸಂಸ್ಥೆಯ ಕನಿಷ್ಠ ಸೌಜನ್ಯ ಮತ್ತು ಜವಾಬ್ದಾರಿಯ ಭಾಗವಾಗಬೇಕಿತ್ತು ಎಂದು ಅವರು ತಿಳಿಸಿದ್ದಾರೆ.
ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಸಂಸ್ಥೆಯ ಆಡಳಿತದಿಂದ ಕುಟುಂಬವನ್ನು ಸಂಪರ್ಕಿಸದೇ ಇರುವ ಕ್ರಮವು ಪೋಷಕರಲ್ಲಿ ಅಸಮಾಧಾನ ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಬೀದರ್‌ನ ಶಾಹೀನ್ ಸಂಸ್ಥೆಯವರು ವಿದ್ಯಾರ್ಥಿನಿಗೆ ಮೊದಲ ಬಾರಿಗೆ ಅನಾರೋಗ್ಯ ಕಾಣಿಸಿಕೊಂಡ ಸಮಯದಿಂದ ಆಸ್ಪತ್ರೆಗೆ ದಾಖಲಿಸುವವರೆಗಿನ ಸಂಪೂರ್ಣ ಘಟನಾಕ್ರಮದ ಕುರಿತು ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.
ವಿದ್ಯಾರ್ಥಿನಿಗೆ ನೀಡಲಾದ ಪ್ರಾಥಮಿಕ ಚಿಕಿತ್ಸೆಯ ವಿವರಗಳು, ವೈದ್ಯಕೀಯ ದಾಖಲೆಗಳು, ನರ್ಸಿಂಗ್ ಸಿಬ್ಬಂದಿಯ ದಾಖಲಾತಿಗಳು, ಸಂಬಂಧಪಟ್ಟ ಸಿಬ್ಬಂದಿಯ ಹೇಳಿಕೆಗಳು ಹಾಗೂ ಲಭ್ಯವಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ವಾಸ್ತವಾಂಶವನ್ನು ಸ್ಪಷ್ಟಪಡಿಸಬೇಕು ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿನಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಸಂದರ್ಭದಲ್ಲಿ ವೈದ್ಯಕೀಯ ನೆರವು ಪಡೆಯಲು ಅಥವಾ ಆಸ್ಪತ್ರೆಗೆ ಸ್ಥಳಾಂತರಿಸಲು ಯಾವುದೇ ವಿಳಂಬವಾಗಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು. ತನಿಖೆಯ ಸಂದರ್ಭದಲ್ಲಿ ‌ ಯಾವುದೇ ನಿರ್ಲಕ್ಷ್ಯ, ಕರ್ತವ್ಯಲೋಪ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ, ತನಿಖೆಯ ವರದಿ ಮತ್ತು ಅನ್ವಯಿಸುವ ಕಾನೂನುಗಳ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಅದೇ ರೀತಿ, ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಶಾಹೀನ್ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳು, ತರಬೇತಿ ಪಡೆದ ಆರೋಗ್ಯ ಸಿಬ್ಬಂದಿ, ತುರ್ತು ವೈದ್ಯಕೀಯ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಮೇಲ್ವಿಚಾರಣೆಯ ಕ್ರಮಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಪೋಷಕರು ಮನವಿ ಮಾಡಿದ್ದಾರೆ.
“ನಮ್ಮ ಮಗಳಿಗೆ ಏನಾಯಿತು ಎಂಬ ಸಂಪೂರ್ಣ ಸತ್ಯ ನಮಗೆ ತಿಳಿಯಬೇಕು. ಯಾರನ್ನೂ ಪೂರ್ವನಿರ್ಧಾರಿತವಾಗಿ ತಪ್ಪಿತಸ್ಥರೆಂದು ಹೇಳುವುದು ನಮ್ಮ ಉದ್ದೇಶವಲ್ಲ. ಆದರೆ ನಮ್ಮ ಮಗಳ ಆರೋಗ್ಯ ಸ್ಥಿತಿ ಈ ಮಟ್ಟಿಗೆ ಗಂಭೀರವಾಗಲು ಕಾರಣವೇನು, ಆಕೆಗೆ ಸಮಯಕ್ಕೆ ಸರಿಯಾದ ವೈದ್ಯಕೀಯ ನೆರವು ದೊರೆತಿತ್ತೇ ಹಾಗೂ ಆಸ್ಪತ್ರೆಗೆ ದಾಖಲಿಸುವಲ್ಲಿ ಯಾವುದೇ ವಿಳಂಬವಾಗಿದೆಯೇ ಎಂಬುದನ್ನು ನಿಷ್ಪಕ್ಷಪಾತ ತನಿಖೆಯ ಮೂಲಕ ಸ್ಪಷ್ಟಪಡಿಸಬೇಕು. ಯಾವುದೇ ತಪ್ಪು ಅಥವಾ ಕರ್ತವ್ಯಲೋಪ ತನಿಖೆಯಲ್ಲಿ ದೃಢಪಟ್ಟರೆ, ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಪೋಷಕರು ಮನವಿ ಮಾಡಿದ್ದಾರೆ.


ನಮ್ಮ ಮಗಳ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಸತ್ಯಾಂಶ ಹೊರಬರಬೇಕು, ನಿಷ್ಪಕ್ಷಪಾತ ತನಿಖೆ ನಡೆಯಬೇಕು ಮತ್ತು ಆಕೆಯ ಚಿಕಿತ್ಸೆಗೆ ಅಗತ್ಯವಿರುವ ಸಂಪೂರ್ಣ ಸಹಕಾರ ದೊರೆಯಬೇಕು. ಮಂಗಳೂರಿನ KMC ಆಸ್ಪತ್ರೆಗೆ ದಾಖಲಾದ ಬಳಿಕವೂ ಕಾಲೇಜು/ಸಂಸ್ಥೆಯ ಆಡಳಿತ ಮಂಡಳಿಯಿಂದ ನಮ್ಮನ್ನು ಸಂಪರ್ಕಿಸಿ ವಿಚಾರಿಸುವ ಯಾವುದೇ ಕರೆ ಬಂದಿಲ್ಲ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕುಟುಂಬದೊಂದಿಗೆ ಕನಿಷ್ಠ ಸೌಜನ್ಯದಿಂದಲಾದರೂ ಸಂಪರ್ಕ ಸಾಧಿಸದಿರುವುದು ನಮಗೆ ಅತ್ಯಂತ ನೋವುಂಟು ಮಾಡಿದೆ” ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advt
error: Content is protected !!