
ಮಂಗಳೂರು: “ಪುತ್ತೂರು ಶಾಸಕ ಅಶೋಕ್ ರೈ ಅವರು ಬಜರಂಗದಳದ ಕಾರ್ಯಕರ್ತರೊಂದಿಗೆ ಓಡಾಡುತ್ತಾರೆ, ಪುತ್ತೂರು ಶಾಸಕರು ಬಿಜೆಪಿ ನಾಯಕರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಯಾವುದೇ ಬೆಲೆಯಿಲ್ಲ. ಈಗ ನನ್ನನ್ನು ಕೊಲೆ ಮಾಡಲು ಬಜರಂಗದಳದ ಕಾರ್ಯಕರ್ತರನ್ನು ಬಿಟ್ಟಿದ್ದಾರೆ. ಅಶೋಕ್ ರೈ ಮತ್ತೆ ಚುನಾವಣೆಯಲ್ಲಿ ನಿಂತರೆ ಮುಂದಿನ ಚುನಾವಣೆಯಲ್ಲಿ ನಾನು ಅಶೋಕ್ ರೈ ವಿರುದ್ಧ ಸ್ಪರ್ಧಿಸುತ್ತೇನೆ. ನನ್ನನ್ನು ಬೆದರಿಸಿ ನನ್ನ ಧ್ವನಿಯನ್ನು ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಯಾರೊಂದಿಗೂ ವೈಯಕ್ತಿಕ ಸಂಘರ್ಷ ಬಯಸುವುದಿಲ್ಲ. ಆದರೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರಿಂದ ಹಿಂದೆ ಸರಿಯುವುದೂ ಇಲ್ಲ. ಜನರ ಪ್ರಶ್ನೆಗಳಿಗೆ ಉತ್ತರಿಸುವುದು ಜನಪ್ರತಿನಿಧಿಯ ಜವಾಬ್ದಾರಿ, ಪ್ರಶ್ನಿಸುವವರನ್ನು ಬೆದರಿಸುವುದು ಪ್ರಜಾಪ್ರಭುತ್ವದ ಮಾರ್ಗವಲ್ಲ” ಎಂದು ಕಾಂಗ್ರೆಸ್ ಕಾರ್ಯಕರ್ತ ಹಕೀಮ್ ಕೂರ್ನಡ್ಕ ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.

ಸೆಪ್ಟೆಂಬರ್ 1, 2026ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಾನು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ ಎಂದು ಹಕೀಮ್ ಆರೋಪಿಸಿದರು. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪತ್ರಿಕಾ ಮಿತ್ರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಪತ್ರಿಕಾಗೋಷ್ಠಿ ಮುಗಿದ ಬಳಿಕವೂ ಶಾಸಕರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನನ್ನೊಂದಿಗೆ ಸಂಘರ್ಷಕ್ಕೆ ಮುಂದಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಅತ್ಯಂತ ಗಂಭೀರ ವಿಚಾರವಾಗಿದೆ ಎಂದರು.
ಈ ಘಟನೆಯ ಕುರಿತು ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಬೇಕು. ನಾನು ಯಾರ ಮೇಲೂ ವೈಯಕ್ತಿಕ ದ್ವೇಷದಿಂದ ಆರೋಪ ಮಾಡುತ್ತಿಲ್ಲ. ಒಬ್ಬ ಸಾಮಾನ್ಯ ನಾಗರಿಕನಾಗಿ ನನ್ನ ಮೇಲೆ ನಡೆದಿರುವುದಾಗಿ ನಾನು ಆರೋಪಿಸಿರುವ ದಾಳಿ ಮತ್ತು ಬೆದರಿಕೆಯ ಕುರಿತು ಪ್ರಶ್ನಿಸುವ ಹಾಗೂ ನ್ಯಾಯ ಕೋರುವ ಸಂಪೂರ್ಣ ಹಕ್ಕು ನನಗಿದೆ. ಘಟನೆಯ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಬಹಿರಂಗಪಡಿಸಿ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಶೋಕ್ ರೈ ಅವರು ಸಂವಿಧಾನಬದ್ಧವಾಗಿ ಆಯ್ಕೆಯಾದ ಜನಪ್ರತಿನಿಧಿಯಾಗಿದ್ದಾರೆ. ಶಾಸಕನ ಸ್ಥಾನದಲ್ಲಿರುವ ವ್ಯಕ್ತಿಯ ಜವಾಬ್ದಾರಿ ಸಾಮಾನ್ಯ ರಾಜಕಾರಣಿಗಿಂತ ಹೆಚ್ಚಿನದಾಗಿರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಂಘರ್ಷಕ್ಕೆ ಕಾರಣವಾಗುವ ಯಾವುದೇ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ.
ರಾಜಕೀಯ ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಸಹಜ ಭಾಗ. ಆದರೆ ಭಿನ್ನಾಭಿಪ್ರಾಯಗಳಿಗೆ ಹಲ್ಲೆ, ಬೆದರಿಕೆ ಅಥವಾ ಸಂಘರ್ಷದ ಮೂಲಕ ಉತ್ತರ ನೀಡುವುದು ಸರಿಯಾದ ಕ್ರಮವಲ್ಲ. ಜನರು ಹಾಗೂ ರಾಜಕೀಯ ವಿರೋಧಿಗಳು ಕೇಳುವ ಪ್ರಶ್ನೆಗಳಿಗೆ ಪ್ರಜಾಪ್ರಭುತ್ವದ ರೀತಿಯಲ್ಲಿ ಉತ್ತರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಹಕೀಮ್ ಹೇಳಿದರು.
ನನ್ನ ಸಂಬಂಧ ಕಾಂಗ್ರೆಸ್ ಪಕ್ಷದೊಂದಿಗೆ ಇಂದು ನಿನ್ನೆಯದಲ್ಲ. ಕಾಂಗ್ರೆಸ್ ಪಕ್ಷ ನನಗೆ ಅಧಿಕಾರ ಪಡೆಯುವ ಮೆಟ್ಟಿಲಲ್ಲ; ಅದು ನನ್ನ ರಾಜಕೀಯ ನಂಬಿಕೆ. ಅಧಿಕಾರಕ್ಕಾಗಿ ಸಂದರ್ಭಕ್ಕೆ ತಕ್ಕಂತೆ ರಾಜಕೀಯ ಬಣ್ಣ ಬದಲಿಸುವುದು ಅಥವಾ ರಾಜಕೀಯ ಮಾಡುವುದು ನನ್ನ ಸ್ವಭಾವವಲ್ಲ.
ನನ್ನ ಸ್ವಂತ ದುಡಿಮೆಯ ಹಣವನ್ನು ಬಳಸಿಕೊಂಡು ಸಮಾಜ ಸೇವೆ ಮಾಡುತ್ತಾ, ಜನರ ನಡುವೆ ಕೆಲಸ ಮಾಡುತ್ತಾ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಇಂದೂ ಅದೇ ನಿಲುವಿನಲ್ಲಿ ಇದ್ದೇನೆ. ಹಿಂದೆಯೂ ಕಾಂಗ್ರೆಸ್, ಮುಂದೆಯೂ ಕಾಂಗ್ರೆಸ್. ಅಧಿಕಾರ ಯಾರ ಕೈಯಲ್ಲಿದೆ ಎಂಬುದನ್ನು ನೋಡಿ ರಾಜಕೀಯ ನಿಲುವು ಬದಲಾಯಿಸುವ ವ್ಯಕ್ತಿತ್ವ ನನ್ನದಲ್ಲ ಎಂದು ಅವರು ಸ್ಪಷ್ಟಪಡಿಸಿದರು.
“ನಾನು ಒಬ್ಬ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತ. ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದರೆ, ನಾಳೆ ವಿರೋಧ ಪಕ್ಷದವರು ಕೇಳಬಹುದಾದ ಇನ್ನಷ್ಟು ಗಂಭೀರ ಪ್ರಶ್ನೆಗಳಿಗೆ ಶಾಸಕರು ಹೇಗೆ ಉತ್ತರ ನೀಡುತ್ತಾರೆ ಎಂಬುದನ್ನು ಜನರು ಗಮನಿಸಬೇಕು. ನನ್ನನ್ನು ಬೆದರಿಸುವ ಮೂಲಕ ನನ್ನ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ನಾನು ಯಾರೊಂದಿಗೂ ವೈಯಕ್ತಿಕ ಸಂಘರ್ಷ ಬಯಸುವುದಿಲ್ಲ. ಆದರೆ ಜನರ ಪರವಾಗಿ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುವುದರಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ಬೆದರಿಕೆಯೂ ನನ್ನ ಧ್ವನಿಯನ್ನು ಮೌನಗೊಳಿಸಲು ಸಾಧ್ಯವಿಲ್ಲ” ಎಂದು ಹಕೀಮ್ ಕೂರ್ನಡ್ಕ ಸ್ಪಷ್ಟಪಡಿಸಿದರು.
