ಶಾಸಕ ಡಾ.ಭರತ್ ಶೆಟ್ಟಿ ಅವರಿಂದ ಸುರತ್ಕಲ್ ಕಚೇರಿಯಲ್ಲಿ ಅಹವಾಲು ಸ್ವೀಕಾರ

ಸುರತ್ಕಲ್: ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ಅವರು ಬುಧವಾರ ಸುರತ್ಕಲ್ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸ್ಥಳೀಯರು ಮೂಲಸೌಕರ್ಯ ಅಭಿವೃದ್ಧಿಗೆ ಮನವಿ ಸಲ್ಲಿಸಿದರು. ಉದ್ಯೋಗ, ಶಿಕ್ಷಣಕ್ಕೆ ನೆರವು ಕೋರಿದರು. ಪಿಂಚಣಿ ಸೌಲಭ್ಯ ಕೊಡಿಸಿಕೊಡುವಂತೆ ಮನವಿ ಮಾಡಿದರು. ಸರ್ಕಾರದ ಗೃಹ ಸೌಲಭ್ಯ ಕಲ್ಪಿಸುವಂತೆ ವಸತಿ ರಹಿತರು ಮನವಿ ಮಾಡಿದರು. ರಾಜಕಾಲುವೆ ತಡೆಗೋಡೆ ನಿರ್ಮಾಣ, ರಸ್ತೆ ಅಭಿವೃದ್ಧಿ, ಚರಂಡಿ ವ್ಯವಸ್ಥೆ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. *ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ಸ್ವಾಗತ ಆದರೆ ಕಾಟಾಚಾರಕ್ಕೆ ಆಗಬಾರದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ ಇದು ಕೇವಲ ಕಾಟಾಚಾರಕ್ಕೆ ನಡೆಯಬಾರದು. ದಕ್ಷಿಣ ಕನ್ನಡ, ಉಡುಪಿ ಕರಾವಳಿ ಭಾಗಕ್ಕೆ ಉಪಯೋಗವಾಗುವಂತಿರಬೇಕು ಎಂದರು. ಮಂಗಳೂರು, ಉಡುಪಿ ಕರಾವಳಿ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮೆಟ್ರೋ ಸೌಲಭ್ಯದ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲಿ ಗಮನ ಸೆಳೆದಿದ್ದೇನೆ. ಇದಕ್ಕೆ ಸರ್ಕಾರ ಆದ್ಯತೆ ನೀಡಬೇಕು ಎಂದರು. ಕರಾವಳಿಯ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಲಿ ನಕಾಶೆ ಜಾರಿಯಾಗಬೇಕು. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದನ್ನು ಸರಿದಾರಿಗೆ ತರಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬಡವರಿಗೆ, ಮಧ್ಯಮ ವರ್ಗದವರಿಗೆ ಮನೆ ಕಟ್ಟುವುದು ದುಸ್ತರವಾಗಿದೆ. ಈ ಹಿಂದೆ 7-8 ಸಾವಿರ ರೂಪಾಯಿ ಇದ್ದ ಮರಳಿನ ಬೆಲೆ ಈಗ 30 ಸಾವಿರ ರೂಪಾಯಿ ಆಗಿದೆ. 25-30 ಇದ್ದ ಕೆಂಪು ಕಲ್ಲಿನ ಬೆಲೆ ಗಗನಕ್ಕೇರಿದೆ. ಸರ್ಕಾರ ಕರಾವಳಿಯಲ್ಲಿ ಗಣಿಗಾರಿಕೆಯನ್ನು ಸೂಕ್ತವಾಗಿ ನಿಭಾಯಿಸಬೇಕು. ಜಿಲ್ಲೆಯ ಸಮಸ್ಯೆಗಳನ್ನು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಬಗೆಹರಿಸಿ, ಈ ಸಭೆಯನ್ನು ಸಾರ್ಥಕಗೊಳಿಸಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರುಗಳು, ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Advt
error: Content is protected !!