
ಮಂಗಳೂರು: ಸುಮಾರು ಐದು ದಶಕಗಳಿಗೂ ಅಧಿಕ ಇತಿಹಾಸ ಹೊಂದಿರುವ ಶಿರ್ಲಾಲುವಿನ ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಣಕಾಸು ವ್ಯವಹಾರಗಳು, ಸಾಲ ವಿತರಣೆ, ಠೇವಣಿ ಖಾತೆಗಳು, ಚಿನ್ನಾಭರಣ ಸಾಲಗಳು, ಮೃತ ಸದಸ್ಯರ ಖಾತೆಗಳು ಹಾಗೂ ಸಂಘದ ದಾಖಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಅವ್ಯವಹಾರ ನಡೆದಿರಬಹುದೆಂಬ ಗಂಭೀರ ಆರೋಪಗಳು ಮತ್ತು ಅನುಮಾನಗಳು ಸದಸ್ಯರು ಹಾಗೂ ಠೇವಣಿದಾರರಿಂದ ವ್ಯಕ್ತವಾಗಿವೆ ಎಂದು ಹಿತರಕ್ಷಣಾ ಸಮಿತಿ ಸದಸ್ಯ ವಸಂತ ಸಾಲಿಯಾನ್ ಅವರು ಪತ್ರಿಕಾಗೋಷ್ಟಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂಘದ ಪ್ರಸ್ತುತ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಈ ಹಿಂದೆ ಸಂಘದ ಲೆಕ್ಕಿಗರಾಗಿದ್ದ ರಾಜೇಶ್ ಎನ್. ಮತ್ತು ಆಡಳಿತ ಮಂಡಳಿಯ ಕೆಲವು ಸದಸ್ಯರ ಕಾರ್ಯವೈಖರಿಯ ಕುರಿತು ವಿಶೇಷ ಗಮನ ಹರಿಸಿ, ಕರ್ನಾಟಕ ಸಹಕಾರಿ ಸಂಘಗಳ ಅಧಿನಿಯಮ, 1959ರ ಕಲಂ 64ರಡಿ ಸ್ವತಂತ್ರ ಮತ್ತು ಸಮಗ್ರ ತನಿಖೆ ನಡೆಸಬೇಕು ಎಂದು ಸಂಘದ ಹಿತರಕ್ಷಣಾ ಸಮಿತಿ ಸಹಕಾರಿ ಇಲಾಖೆಯನ್ನು ಒತ್ತಾಯಿಸಿದೆ. ಮೂಲ ಮನವಿಯಲ್ಲಿಯೂ ಆರೋಪಗಳು ವಿವಿಧ ಸದಸ್ಯರು ಮತ್ತು ಠೇವಣಿದಾರರಿಂದ ಬಂದಿರುವ ಮಾಹಿತಿಯ ಆಧಾರದ ಮೇಲಿದ್ದು, ಅವುಗಳ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ನಿರ್ಧರಿಸಬೇಕೆಂದು ಒತ್ತಾಯಿಸಿದರು.

ರೈತರ ಸಾಲ ನವೀಕರಣದಲ್ಲೇ ಅಕ್ರಮದ ಆರೋಪ:
ಪ್ರತಿ ವರ್ಷ ಕೃಷಿ ಸಾಲ ನವೀಕರಣದ ಸಂದರ್ಭದಲ್ಲಿ ಕೆಲವು ರೈತ ಸದಸ್ಯರಿಂದ ಸಾಲದ ಮೊತ್ತದ ಮೇಲೆ ಸುಮಾರು 10%ವರೆಗೆ, ಕೆಲವೊಮ್ಮೆ 3% ರಿಂದ 4%ರಷ್ಟು ಹಣವನ್ನು ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆ ಹಣವನ್ನು ಸದಸ್ಯರ ಉಳಿತಾಯ ಖಾತೆಗೆ ಜಮೆ ಮಾಡಿ, ನಂತರ ಖಾಲಿ Withdrawal Slip ಮೇಲೆ ಸಹಿ ಪಡೆದು ಅದೇ ಹಣವನ್ನು ನಗದಾಗಿ ಹಿಂಪಡೆಯಲಾಗುತ್ತಿದೆ ಎಂಬ ಗಂಭೀರ ಆರೋಪವೂ ಇದೆ. ಈ ಕುರಿತು ಸದಸ್ಯರು ಪ್ರಸ್ತುತ ಪ್ರಭಾರ CEO ರಾಜೇಶ್ ಎನ್. ಹಾಗೂ ಸಂಘದ ಅಧ್ಯಕ್ಷರನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ ಎಂಬ ಆರೋಪವೂ ಹಿತರಕ್ಷಣಾ ಸಮಿತಿಯ ಗಮನಕ್ಕೆ ಬಂದಿದೆ.
ಮೃತ ಸದಸ್ಯರ ಖಾತೆಗಳಲ್ಲೂ ವ್ಯವಹಾರ!
ಮೃತ ಸದಸ್ಯರ ಖಾತೆಗಳು ಅವರ ಮರಣದ ನಂತರವೂ ಸಕ್ರಿಯವಾಗಿದ್ದು, ಕೆಲವು ಖಾತೆಗಳಲ್ಲಿ ಸಾಲ ಹಾಗೂ ಹಣಕಾಸು ವ್ಯವಹಾರಗಳು ನಡೆದಿರುವ ಬಗ್ಗೆ ಮೃತ ಸದಸ್ಯರ ವಾರಸುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮರಣದ ನಂತರ ಸಾಲ ಮಂಜೂರಾಗಿರುವುದಾಗಿ ದಾಖಲೆಗಳಲ್ಲಿ ಕಂಡುಬಂದಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಇಂತಹ ವ್ಯವಹಾರಗಳಿದ್ದರೆ ಅವುಗಳ ಹಿಂದೆ ಯಾರು ಇದ್ದರು ಎಂಬುದನ್ನು ಪತ್ತೆಹಚ್ಚಲು ಖಾತೆ ದಾಖಲೆಗಳು, Withdrawal Slips, KYC ದಾಖಲೆಗಳು ಹಾಗೂ ಸಹಿಗಳನ್ನು ಪರಿಶೀಲಿಸುವ ಅಗತ್ಯವಿದೆ.
ಚಿನ್ನಾಭರಣ ಸಾಲದಲ್ಲೂ ಅವ್ಯವಹಾರ!
ಸಂಘದ ಚಿನ್ನಾಭರಣ ಸಾಲ ವ್ಯವಹಾರಗಳ ಕುರಿತು ಅತ್ಯಂತ ಗಂಭೀರ ಪ್ರಶ್ನೆಗಳು ಎದ್ದಿವೆ. ಸದಸ್ಯರು ಅಡವಿಟ್ಟಿರುವ ಕೆಲವು ಚಿನ್ನಾಭರಣಗಳು ಸಂಘದ ಲಾಕರ್‌ನಲ್ಲಿ ಲಭ್ಯವಿಲ್ಲ ಎಂಬ ಆರೋಪಗಳಿದ್ದು, ನಕಲಿ ಅಥವಾ ಕಡಿಮೆ ಗುಣಮಟ್ಟದ ಚಿನ್ನಾಭರಣಗಳ ಮೇಲೆ ಸಾಲ ನೀಡಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಇದರ ಜೊತೆಗೆ, ಸಂಘದ ದಾಖಲೆಗಳಲ್ಲಿ ಇರುವ ಚಿನ್ನಾಭರಣಗಳನ್ನು ಹೊರಗಿನ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಅಡವಿಟ್ಟು ಹಣ ಪಡೆಯಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ. ಹೀಗಾಗಿ ಸಂಘದ ಎಲ್ಲಾ ಚಿನ್ನಾಭರಣಗಳನ್ನು ಸ್ವತಂತ್ರ ಮೌಲ್ಯಮಾಪಕರ ಸಮ್ಮುಖದಲ್ಲಿ ತಕ್ಷಣ ಭೌತಿಕವಾಗಿ ಪರಿಶೀಲಿಸಿ, Gold Loan Register ಮತ್ತು ಸಾಲ ಖಾತೆಗಳೊಂದಿಗೆ ಹೊಂದಾಣಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.
ಠೇವಣಿದಾರರ ಹಣದ ವಿರುದ್ಧ ನಕಲಿ ಸಾಲಗಳ ಆರೋಪ:
ಕೆಲವು ಸದಸ್ಯರ ಹೆಸರಿನಲ್ಲಿ ನಕಲಿ ಠೇವಣಿ ಪತ್ರಗಳನ್ನು ಸೃಷ್ಟಿಸಿ, ಠೇವಣಿದಾರರಿಗೆ ತಿಳಿಯದಂತೆ ಅವರ ಸಹಿಗಳನ್ನು ಬಳಸಿಕೊಂಡು ಠೇವಣಿ ಮೊತ್ತದ ವಿರುದ್ಧ ಸಾಲ ಸೃಷ್ಟಿಸಲಾಗಿದೆ ಎಂಬ ಆರೋಪಗಳಿವೆ. ಕೆಲವು ಠೇವಣಿದಾರರು ತಮ್ಮ ಹೆಸರಿನಲ್ಲಿ ಸಾಲ ಅಥವಾ ಇತರ ಹಣಕಾಸು ವ್ಯವಹಾರಗಳು ನಡೆದಿರುವುದೇ ತಮಗೆ ತಿಳಿದಿಲ್ಲ ಎಂದು ಪ್ರಶ್ನಿಸಿರುವುದಾಗಿ ಹಿತರಕ್ಷಣಾ ಸಮಿತಿಯ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದೆ.
Fixed Deposit Accounts ಮತ್ತು ಅವುಗಳ ವಿರುದ್ಧ ಸೃಷ್ಟಿಯಾಗಿರುವ Loan Accountsಗಳನ್ನು ಪ್ರತಿಯೊಬ್ಬ ಠೇವಣಿದಾರರೊಂದಿಗೆ ನೇರವಾಗಿ ದೃಢೀಕರಿಸಬೇಕು ಎಂಬ ಆಗ್ರಹವೂ ಇದೆ.:
ಆಡಳಿತ ಮಂಡಳಿಯ ಕೆಲವು ಸದಸ್ಯರು, ಅವರ ಕುಟುಂಬದವರು ಹಾಗೂ ಆಪ್ತರ ಹೆಸರಿನಲ್ಲಿ ದೊಡ್ಡ ಮೊತ್ತದ ಸಾಲಗಳನ್ನು ಪಡೆದಿದ್ದು, ಅವು ಬಾಕಿಯಾಗಿವೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಪ್ರಸ್ತುತ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅವರ ಸಂಬಂಧಿತ ವ್ಯಕ್ತಿಗಳ ಸಾಲ ಖಾತೆಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ಸಾಲ ಮಂಜೂರಾತಿ, Board Approval, ಭದ್ರತೆ, ಮರುಪಾವತಿ ಮತ್ತು ಬಾಕಿ ಮೊತ್ತದ ಕುರಿತು ವಿಶೇಷ ವರದಿ ಸಿದ್ಧಪಡಿಸಬೇಕೆಂದು ಆಗ್ರಹಿಸಲಾಗಿದೆ.
ಖಾಲಿ ಚೆಕ್ ಮತ್ತು ಸ್ಟ್ಯಾಂಪ್ ಪೇಪರ್ ಪಡೆದುಕೊಳ್ಳುತ್ತಿರುವ ಆರೋಪ:
ಸಾಲಗಾರರಿಂದ ಭದ್ರತೆಯ ಹೆಸರಿನಲ್ಲಿ ಖಾಲಿ ಚೆಕ್‌ಗಳು, ಖಾಲಿ ಸ್ಟ್ಯಾಂಪ್ ಪೇಪರ್‌ಗಳು ಮತ್ತು ಇತರ ದಾಖಲೆಗಳ ಮೇಲೆ ಸಹಿ ಪಡೆಯಲಾಗುತ್ತಿದೆ ಎಂಬ ಆರೋಪಗಳಿವೆ. ಅವುಗಳನ್ನು ನಂತರ ವೈಯಕ್ತಿಕ ಹಣಕಾಸು ವ್ಯವಹಾರಗಳಲ್ಲಿ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಬಗ್ಗೆ ಸಾಲಗಾರರ ಗೌಪ್ಯ ಹೇಳಿಕೆಗಳನ್ನು ಪಡೆದು ತನಿಖೆ ನಡೆಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ರಾಜೇಶ್ ಎನ್. ಅವರ ವೈಯಕ್ತಿಕ ಆಸ್ತಿ ಮತ್ತು ಜೀವನಶೈಲಿಯ ಕುರಿತು ಕೂಡ ಗ್ರಾಮಸ್ಥರಲ್ಲಿ ಪ್ರಶ್ನೆಗಳು ಎದ್ದಿವೆ. ವಿಶೇಷವಾಗಿ, ಅವರು ನಿರ್ಮಿಸಿರುವುದಾಗಿ ಹೇಳಲಾಗುತ್ತಿರುವ ಬಹುಕೋಟಿ ಮೌಲ್ಯದ ಬಂಗಲೆ ರೀತಿಯ ಮನೆ ಹಾಗೂ ಅವರ ಆದಾಯದ ಮೂಲಗಳ ಕುರಿತು ಸದಸ್ಯರು ಮತ್ತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಯಾವುದೇ ವ್ಯಕ್ತಿಯ ವೈಯಕ್ತಿಕ ಆಸ್ತಿಯನ್ನು ಮಾತ್ರ ಆಧರಿಸಿ ಅವ್ಯವಹಾರದ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಆದಾಯದ ಮೂಲ, ಆಸ್ತಿ ಖರೀದಿ, ಸಾಲ, ಬ್ಯಾಂಕ್ ವ್ಯವಹಾರ ಮತ್ತು ಸಂಘದ ಹಣಕಾಸು ವ್ಯವಹಾರಗಳ ನಡುವೆ ಯಾವುದೇ ಸಂಬಂಧವಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಕಾನೂನುಬದ್ಧವಾಗಿ ಪರಿಶೀಲಿಸಬೇಕಾಗಿದೆ. ಮೂಲ ದೂರಿನಲ್ಲಿಯೂ ಈ ಅಂಶವನ್ನು ತನಿಖೆಗೆ ಒಳಪಡಿಸಬೇಕಾದ ಸದಸ್ಯರ ಅನುಮಾನವಾಗಿ ಮಾತ್ರ ಉಲ್ಲೇಖಿಸಲಾಗಿದೆ.
ವಸಂತ ಕುಲಾಲ್, ವಿಶ್ವನಾಥ್ ಸಾಲಿಯಾನ್, ಕೃಷ್ಣಪ್ಪ ಗೌಡ, ಚಿದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.