“ರಾಜ್ಯ ಸರಕಾರದಿಂದ ಲಂಚ ಗ್ಯಾರಂಟಿ!” -ಡಾ.ವೈ.ಭರತ್ ಶೆಟ್ಟಿ


ಮಂಗಳೂರು : ರಾಜ್ಯದಲ್ಲಿ ‘ಲಂಚ ಗ್ಯಾರಂಟಿ’ ಆಡಳಿತ ಮಾತ್ರವೇ ಅತ್ಯಂತ ಚುರುಕಾಗಿ ನಡೆಯುತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ತೀವ್ರವಾಗಿ ವ್ಯಂಗ್ಯವಾಡಿದ್ದಾರೆ. ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಂತ್ರಿಗಳಿಗೆ ನಿಗದಿತ ಕಮಿಷನ್ ತಲುಪಿಸುವ ಏಕೈಕ ಉದ್ದೇಶದಿಂದ ಅಧಿಕಾರಿಗಳು ಸಾರ್ವಜನಿಕರಿಂದ ಲಂಚ ಸಂಗ್ರಹಿಸುವ ಕಾರ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಪ್ರಸ್ತುತ ಸರ್ಕಾರದ ಸಚಿವರುಗಳೇ ನೇರವಾಗಿ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಆರೋಪಿಸುತ್ತಿರುವುದು ಅತ್ಯಂತ ಗಮನಾರ್ಹ ಸಂಗತಿಯಾಗಿದೆ. ರಾಜ್ಯದ ಸಚಿವ ಸಂಪುಟದಲ್ಲಿ ‘ಪೇಮೆಂಟ್ ಕೋಟಾ’ ಅಡಿಯಲ್ಲಿ ಸಚಿವರಾದವರು, ತಮ್ಮ ಪ್ರಭಾವ ಹಾಗೂ ಹುದ್ದೆಯನ್ನು ಬಳಸಿಕೊಂಡು ‘ಪೇಮೆಂಟ್ ಅಧಿಕಾರಿಗಳ’ ಮೂಲಕ ತಳಮಟ್ಟದಲ್ಲಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದಕ್ಕೆ ಇತ್ತೀಚಿನ ವಿದ್ಯಮಾನಗಳೇ ಜೀವಂತ ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.

ಇದೇ ವೇಳೆ, ಕರ್ನಾಟಕದಲ್ಲಿ ಸಾರ್ವಜನಿಕ ಕೆಲಸಗಳಿಗಾಗಿ ಪ್ರತಿ 100 ಜನರಲ್ಲಿ 63 ಮಂದಿ ಲಂಚ ನೀಡಬೇಕಾದ ದುಸ್ಥಿತಿ ಇದೆ ಎಂದು ರಾಜ್ಯ ಲೋಕಾಯುಕ್ತ ಎನ್.ಬಿ. ವೀರಪ್ಪ ಅವರು ಬಹಿರಂಗವಾಗಿ ಹೇಳಿಕೆ ನೀಡಿರುವುದನ್ನು ಶಾಸಕ ಭರತ್ ಶೆಟ್ಟಿ ಉಲ್ಲೇಖಿಸಿದರು. ಈ ಹೇಳಿಕೆಯು ರಾಜ್ಯದಲ್ಲಿ ತಾಂಡವವಾಡುತ್ತಿರುವ ಆಡಳಿತಾತ್ಮಕ ಭ್ರಷ್ಟಾಚಾರಕ್ಕೆ ಪ್ರತ್ಯಕ್ಷ ಹಾಗೂ ಬಲವಾದ ಸಾಕ್ಷಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಪ್ರಮುಖರಾದ ಸಂದೀಪ್ ಪಚ್ಚನಾಡಿ, ಗುರುಚರಣ್ ಹಾಗೂ ಮಾಧ್ಯಮ ಸಂಚಾಲಕ ಅರುಣ್ ಶೇಟ್ ಉಪಸ್ಥಿತರಿದ್ದರು.

Advt
error: Content is protected !!