ಅಲ್ಪಸಂಖ್ಯಾತ ಮೀನುಗಾರರ ಸಂಘದಿಂದ ಪ್ರತಿಭಾ ಪುರಸ್ಕಾರ, ಫಯರ್ ಬಾಲ್ ವಿತರಣೆ


ಮಂಗಳೂರು: ಸಮಾಜದಲ್ಲಿ ಹಿಂದುಳಿದ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನೆಲೆಯಲ್ಲಿ ನೀಡುವ ಸ್ಕಾಲರ್ ಶಿಪ್ ಪಡೆದವರು ವೃತ್ತಿ ಜೀವನದಲ್ಲಿ ಇತರರಿಗೆ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಹೇಳಿದರು.
ಮಂಗಳೂರು ಉತ್ತರ ಧಕ್ಕೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಆಶ್ರಯದಲ್ಲಿ ‘ಬಹರ್ ಎ ನೂರ್’ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದಿಂದ ಪ್ರತಿವರ್ಷ ವಿದ್ಯಾವೇತನ, ಸಾಧಕ ವಿದ್ಯಾರ್ಥಿಗಳಿಗೆ ಧನಸಹಾಯದೊಂದಿಗೆ ಸನ್ಮಾನ, ಕಾಯಿಲೆ ಪೀಡಿತರು, ಮೀನುಗಾರರ ರಕ್ಷಣೆ, ಕುಟುಂಬಕ್ಕೆ ಧನ ಸಹಾಯ, ಕಿಡ್ನಿ ವೈಫಲ್ಯಕ್ಕೊಳಗಾದವರಿಗೆ ಡಯಾಲಿಸಿಸ್ ಗೆ ಮಾಸಿಕ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.
ಲೆಕ್ಕ ಪರಿಶೋಧಕ ಪ್ರಜನ್ಯ ಶೆಟ್ಟಿ ಮಾತನಾಡಿ, ಮೀನುಗಾರರ ಕುಟುಂಬ ಮಾತ್ರವಲ್ಲದೆ ಸಮಾಜದಲ್ಲಿ ನೊಂದವರಿಗೆ ನಿರಂತರ ಸಹಾಯ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಾ ಬಂದಿದುವ ಸಂಘ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಸಮಾಜದಲ್ಲಿ ಸತ್ಪ್ರಜೆಗಳನ್ನು ಸೃಷ್ಟಿಸುತ್ತಿದೆ ಎಂದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 80 ವಿದ್ಯಾರ್ಥಿಗಳಿಗೆ ತಲಾ ಹತ್ತು ಸಾವಿರ ರೂ.ನಂತೆ ಸ್ಕಾಲರ್ ಶಿಪ್ ನೀಡಿ ಪುರಸ್ಕರಿಸಲಾಯಿತು. ಮೀನುಗಾರಿಕಾ ಬೋಟುಗಳನ್ನು ಬೆಂಕಿಯಿಂದ ರಕ್ಷಿಸುವ ‘ಫಯರ್ ಬಾಲ್’ ಯಂತ್ರ ವಿತರಿಸಲಾಯಿತು.‌
ಲೆಕ್ಕ ಪರಿಶೋಧಕರಾದ ಮಧುಕರ್ ಕಾಮತ್ ಮಾತನಾಡಿದರು. ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸ್ಹಾಕ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ನಿರ್ದೇಶಕರಾದ ಯು.ಟಿ.ಅಹ್ಮದ್ ಶರೀಫ್, ಬಿ.ಇಬ್ರಾಹಿಂ ಖಲೀಲ್, ಎಸ್.ಎಂ.ಇಬ್ರಾಹಿಂ, ಟಿ.ಎಚ್.ಹಮೀದ್, ಮುಹಮ್ಮದ್ ಅಶ್ರಫ್, ಎ.ಎಂ.ಕೆ.ಮಹಮ್ಮದ್ ಇಬ್ರಾಹಿಂ, ಬಿ.ಮಹಮ್ಮದ್ ಶಾಲಿ, ಎಂ.ಎ.ಗಫೂರ್, ಎಸ್.ಕೆ.ಇಸ್ಮಾಯಿಲ್, ಎ.ಎನ್.ಆರ್.ಅನ್ವರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಅಬ್ದುಲ್ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

Advt
error: Content is protected !!