
ಮಂಗಳೂರು: ಕರ್ನಾಟಕ ರಾಜ್ಯ ಸುನ್ನೀ ಸ್ಪೂಡೆಂಟ್ಸ್ ಫೆಡರೇಷನ್ (ಎಸ್ಸೆಸ್ಸೆಫ್) ಇದರ 14ನೇ ರಾಜ್ಯಮಟ್ಟದ ಸಾಹಿತ್ಯೋತ್ಸವ ಸೆಪ್ಟೆಂಬರ್ 4,5,6 ತಾರೀಖುಗಳಲ್ಲಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಮಸ್‌ದರ್ ಕ್ಯಾಂಪಸ್ ನಲ್ಲಿ ನಡೆಯಲಿದೆ ಎಂದು ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಸೆಪ್ಟೆಂಬರ್ 4ರಂದು ಸಂಜೆ 5ಗಂಟೆಗೆ ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವದ ಧ್ವಜಾರೋಹಣ ಸಾಹಿತ್ಯೋತ್ಸವ ಸಮಿತಿ ಅಧ್ಯಕ್ಷರಾದ ವಾರದ ಗೌಸ್ ಮೊಯಿದೀನ್‌ರವರು ನೆರವೇರಿಸಲಿದ್ದು ರಾತ್ರಿ ಗ್ರಾಂಡ್ ಮೌಲೀದ್ ಮಜ್ಜಿಸ್ ನಡೆಯಲಿದೆ.
ಸೆಪ್ಟೆಂಬರ್ 5, 6 ತಾರೀಖುಗಳಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಾಹಿತ್ಯೋತ್ಸವಕ್ಕೆ 27 ಜಿಲ್ಲೆಗಳ 2000 ಆಯ್ದ ಪ್ರತಿಭೆಗಳು ಆಗಮಿಸಲಿದ್ದು 9 ವೇದಿಕೆಗಳಲ್ಲಿ 150 ವೈವಿಧ್ಯಮಯ ಸ್ಪರ್ಧೆಗಳು ನಡೆಯಲಿದೆ.

ಸಾಹಿತ್ಯೋತ್ಸವ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 5 ಬೆಳಿಗ್ಗೆ 10ಗಂಟೆಗೆ ನಡೆಯಲಿದ್ದು ಸಾಹಿತ್ಯೋತ್ಸವ ಸ್ವಾಗತ ಸಮಿತಿ ಅಧ್ಯಕ್ಷರಾದ ವಾರದಾ ಗೌಸ್ ಮೊಯಿದೀನ್ ಅಧ್ಯಕ್ಷತೆ ವಹಿಸಲಿದ್ದಾರೆ.
ಖ್ಯಾತ ಸಾಹಿತಿಗಳಾದ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ನಾಡೋಜ ಕುಂ ವೀರಭದ್ರಪ್ಪ ರವರು 14ನೇ ರಾಜ್ಯ ಮಟ್ಟದ ಸಾಹಿತ್ಯೋತ್ಸವ ಉದ್ಘಾಟನೆ ಮಾಡಲಿದ್ದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ, ಕೋಶಾಧಿಕಾರಿ ಅನ್ವರ್ ಅಸ್‌ಅದಿ, ಸಾಹಿತ್ಯೋತ್ಸವ ಸಮಿತಿ ಚೇರಾನ್ ಅಶ್ರಫ್ ಸಖಾಫಿ ದಾವಣಗೆರೆ, ಜುನೈದ್ ಸಖಾಫಿ, ಸಿನಾನ್ ಸಖಾಫಿ, ಮಹಬೂಬ್ ಸಿದ್ದಾಪುರ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ರಾಜ್ಯ ಮಟ್ಟದ ಸಾಹಿತ್ಯೋತ್ಸವ ಸೆಪ್ಟೆಂಬರ್ 06 ರವಿವಾರ ಸಂಜೆ ಸಮಾರೋಪಗೊಳ್ಳಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಹಮೀದ್ ತಲಪಾಡಿ, ಅಜ್ಮಲ್ ಕಾವೂರು ಮತ್ತಿತರರು ಉಪಸ್ಥಿತರಿದ್ದರು.
