ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಖದೀಮರ ಹೆಡೆಮುರಿ ಕಟ್ಟಿದ ನಗರ ಪೊಲೀಸರು

ಮಂಗಳೂರು: ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ (MDMA), ಗಾಂಜಾ, ಆಟೋರಿಕ್ಷಾ ಹಾಗೂ ಕೆಟಿಎಂ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಮೊದಲ ಪ್ರಕರಣದಲ್ಲಿ, ಕದ್ರಿ (ಪೂರ್ವ) ಪೊಲೀಸ್ ಠಾಣಾ ವ್ಯಾಪ್ತಿಯ ಪಂಪ್‌ವೆಲ್‌ನಿಂದ ನಂತೂರು ಕಡೆಗೆ ತೆರಳುವ ಸರ್ವಿಸ್ ರಸ್ತೆ ಬದಿಯಲ್ಲಿ ಆಟೋರಿಕ್ಷಾದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಕೇರಳದ ಮಂಜೇಶ್ವರ ಮೂಲದ ಮೊಹಮ್ಮದ್ ಇರ್ಷಾದ್ (೩೦) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಆರೋಪಿಯಿಂದ ₹1.36 ಲಕ್ಷ ಮೌಲ್ಯದ 13.69 ಗ್ರಾಂ ಎಂಡಿಎಂಎ, ನಗದು ಹಣ ಹಾಗೂ ಆಟೋರಿಕ್ಷಾ ಸೇರಿದಂತೆ ಒಟ್ಟು ₹2,94,500 ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಎರಡನೇ ಪ್ರಕರಣದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಕಣ್ಣೂರು ಮೂಲದ, ಪ್ರಸ್ತುತ ಕೊಂಚಾಡಿಯಲ್ಲಿ ವಾಸವಿದ್ದ ನಿತಿನ್ ಕೃಷ್ಣನ್ (೨೭) ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಕದ್ರಿ ಪದವು ಮೈದಾನದ ಬಳಿಯ ಆಯುರ್ವೇದ ಕ್ಲಿನಿಕ್‌ನಲ್ಲಿ ಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಈತ, ಗಾಂಜಾ ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆಶ್ವಿನ್ ಕ್ಸೇವಿಯರ್ ನೀಡಿದ ಸುಳಿವು ಆಧರಿಸಿ ಸಿಕ್ಕಿಬಿದ್ದಿದ್ದಾನೆ.

Advt

ಆರೋಪಿ ನಿತಿನ್ ಕೃಷ್ಣನ್ ಬಳಿಯಿದ್ದ ₹60,000 ಮೌಲ್ಯದ 1 ಕೆ.ಜಿ. 206 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ ಕೆಟಿಎಂ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಫೋನ್ ಅನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ. ನಗರದಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರ ಈ ಕಾರ್ಯಾಚರಣೆ ಮುಂದುವರಿದಿದೆ.

error: Content is protected !!